ಬೆಂಗಳೂರು: ‘ಮಾಜಿ ಶಾಸಕ ಮತ್ತು ಹಿರಿಯ ರಾಜಕಾರಣಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಸ್ನೇಹಿತರಾಗಿದ್ದ ಹೆಗ್ಡೆ ಅವರು ಮತ್ತು ನಾನು 1983ರಲ್ಲಿ ವಿಧಾನಸಭೆಯಲ್ಲಿ ಸದಸ್ಯರಾಗಿದ್ದೆವು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ. ಅಪ್ಪಣ್ಣ ಹೆಗ್ಡೆಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

(ನಿಧನರಾದ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಬಸ್ರೂರು)
‘ರಾಜಕೀಯ ಕ್ಷೇತ್ರವನ್ನು ಸಮಾಜದ ಸೇವೆ ಮಾಡಲು ಒದಗಿ ಬಂದ ಅವಕಾಶ ಎಂದು ಬಗೆದಿದ್ದ ಅಪ್ಪಣ್ಣ ಹೆಗ್ಡೆ ಅವರು ಸರಳ, ಸಜ್ಜನಿಕೆಯ ಮನುಷ್ಯ. ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನತಾದಳವನ್ನು ಕಟ್ಟಿ ಬೆಳೆಸಿದವರು’.
‘ಅವರ ನಿರ್ಗಮನದಿಂದ ಹಳೆಯ ತಲೆಮಾರಿನ ಮತ್ತೊಬ್ಬ ರಾಜಕಾರಣಿ ನಮ್ಮಿಂದ ದೂರವಾದಂತೆ ಆಗಿದೆ. ಅವರ ಬದುಕು ಮತ್ತು ಸಾಧನೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ’ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಅಜಾತಶತ್ರು, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬೈಂದೂರು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆಯವರಿಗೆ 91 ವರ್ಷ ವಯಸ್ಸಾಗಿತ್ತು. ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಮರ್ಪಣಾ ಮನೋಭಾವನೆಯಿಂದ ತೊಡಗಿಸಿಕೊಂಡ ಅವರು ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದಾರೆ.
ಗಣ್ಯರ ಸಂತಾಪ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೇರಿದಂತೆ ರಾಜಕೀಯ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು, ಪ್ರಮುಖರು ಸಂತಾಪ ಸೂಚಿಸಿದ್ದಾರೆ.
Comments are closed.