ಕುಂದಾಪುರ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಲಭ್ಯತೆಯನ್ನು ಬಲಗೊಳಿಸಲು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರವನ್ನು ವಿಸ್ತರಿಸಲಿದೆ. ಅಕ್ಟೋಬರ್ 26ರಂದು ಈ ಕೇಂದ್ರ ಉದ್ಘಾಟನೆಗೊಳ್ಳಲಿದೆ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಹೇಳಿದರು.

ಕುಂದಾಪುರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಂ.ಸಿ ಆಸ್ಪತ್ರೆಯ ತುರ್ತು ವಿಭಾಗದ ತಜ್ಞರ ಸೇವೆಯನ್ನು ಕುಂದಾಪುರದ ಜನರು ಶ್ರೀ ಸಾಯಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಲಿದ್ದಾರೆ. ಈ ನಡೆಯು ವೈದ್ಯಕೀಯ ಸೇವೆಯನ್ನು ಮತ್ತಷ್ಟು ವಿಸ್ತರಿಸಿ , ಗೋಲ್ಡನ್ ಅವರ್ (ತುರ್ತು ಸಮಯ)ದಲ್ಲಿ ರೋಗಿಯನ್ನು ರಕ್ಪಿಸುವಲ್ಲಿ ಹಾಗೂ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ನೆರವಾಗಲಿದೆ ಎಂದರು. ಪುತ್ತೂರು, ಕಕ್ಕಿಂಜೆ, ಬೆಳ್ತಂಗಡಿ ಮತ್ತು ಕೇರಳದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಹೊಂದಿದ್ದೇವೆ. ಹಲವಾರು ಹೃದಯಾಘಾತ , ಸ್ಟ್ರೋಕ್, ಟ್ರಾಮಾ, ಪಾಲಿ ಟ್ರಾಮಾ, ಹಾವು ಕಡಿತ, ವಿಷ ಸೇವನೆ, ಮಕ್ಕಳ ತುರ್ತು ಚಿಕಿತ್ಸೆ ಮತ್ತು ಹಲವು ತುರ್ತು ವೈದ್ಯಕೀಯ ಪ್ರಕರಣಗಳನ್ನು ಸ್ಥಿರಗೊಳಿಸಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ತಕ್ಷಣ ಹಾಗೂ ಸರಿಯಾದ ಸಮಯದಲ್ಲಿ ತುರ್ತು ಚಿಕಿತ್ಸೆ ಒದಗಿಸುವ ಮೂಲಕ ರೋಗಿಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿರುತ್ತದೆ. ಮಲ್ಟಿ ಸ್ಪೆಷಾಲಿಟಿ ಚಿಕಿತ್ಸೆ ಅಗತ್ಯವಿದ್ದಲ್ಲಿ, ಕಾರ್ಡಿಯಾಕ್, ನ್ಯೂರೊ ಮಕ್ಕಳ ಅಥವಾ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಯನ್ನು ಮುಂದಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ವೈದ್ಯಕೀಯ ಆರೈಕೆಗೆ ವರ್ಗಾಯಿಸಲಾಗುವುದು. ಅಲ್ಲಿ ಉತ್ತಮವಾದ ಬಹು ವಿಭಾಗದ ಆರೈಕೆಯನ್ನು ನೀಡಲಾಗುತ್ತದೆ ಎಂದರು.
ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ರಂಜನ್ ಶೆಟ್ಟಿ ಈ ಯೋಜನೆ ಬಗ್ಗೆ ಮಾತನಾಡಿ, “ಕೆಎಂಸಿ ಆಸ್ಪತ್ರೆಯಿಂದ ಎಮರ್ಜೆನ್ಸಿ ಮೆಡಿಸಿನ್ ತಂಡದ ಅನುಭವ ಮತ್ತು ಪರಿಣತಿ ಕುಂದಾಪುರ ಮತ್ತು ಸುತ್ತಮುತ್ತಲಿನ ಜನರಿಗೆ ಸಾಕಷ್ಟು ಅನುಕೂಲಕರವಾಗಲಿದೆ. ನಾವು ಸುತ್ತಮುತ್ತಲಿನ ಪ್ರದೇಶದಿಂದ ಸ್ಟ್ರೋಕ್, ಹೃದಯಾಘಾತ , ವಿಷ ಸೇವನೆ, ಮಕ್ಕಳ ತುರ್ತು ಪ್ರಕರಣಗಳು ಮತ್ತು ರಸ್ತೆ ಅಪಘಾತ ಮುಂತಾದ ಪ್ರಕರಣಗಳನ್ನು ಪಡೆಯುತ್ತಿದ್ದೇವೆ. ಈ ಪಾಲುದಾರಿಕೆಯು ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳ ಆರೈಕೆಯ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೆ, ಸಮುದಾಯದ ಆರೋಗ್ಯ ಅಗತ್ಯಗಳನ್ನು ಪೂರೈಸಲು ನಮ್ಮ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಶ್ರೀ ಸಾಯಿ ಆಸ್ಪತ್ರೆಗೆ ಸೇರ್ಪಡೆಯಾಗುತ್ತಿರುವ ಈ ತುರ್ತು ವೈದ್ಯಕೀಯ ಕೇಂದ್ರವು ತುರ್ತು ಪರಿಸ್ಥಿತಿ ಸಮಯದಲ್ಲಿ ದೂರ ಪ್ರಯಾಣ ಮಾಡದೇ ಹತ್ತಿರದಲ್ಲೇ ಚಿಕಿತ್ಸೆ ಪಡೆಯುವ ಸೌಲಭ್ಯ ಕಲ್ಪಿಸಿದೆ. ಗೋಲ್ಡನ್ ಅವರ್ ಸಮಯದಲ್ಲಿ ತಕ್ಷಣದ ಚಿಕಿತ್ಸೆ ನೀಡಿ ರೋಗಿಯು ಗುಣಮುಖನಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರಿನ ಬಿ ಆರ್ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ಸೀನಿಯರ್ ಮ್ಯಾನೇಜರ್ ಮಾರ್ಕೆಟಿಂಗ್ ವಿಭಾಗದ ರಾಕೇಶ್ ಮಾತನಾಡಿ, ಈ ಪಾಲುದಾರಿಕೆಯು ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಬೈಂದೂರು, ಕೊಲ್ಲೂರು, ಸಾಸ್ತಾನ, ಸಾಲಿಗ್ರಾಮ, ತೆಕ್ಕಟ್ಟೆ, ಕುಂಭಾಶಿ, ತಲ್ಲೂರು, ಭಟ್ಕಳ ಹೊನ್ನಾವರ ಹೊನ್ನಾವರ ಕುಮಟಾ ಭಾಗದಲ್ಲಿ ಆರೋಗ್ಯ ಸೇವೆಯ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗುಣಮಟ್ಟದ ಆರೋಗ್ಯ ಸೇವೆ ನೀಡುವ ಕೆಎಂಸಿ ಆಸ್ಪತ್ರೆಯ ಬದ್ದತೆಗೆ ಇದೊಂದು ಮೈಲಿಗಲ್ಲು. ಶ್ರೀ ಸಾಯಿ ಆಸ್ಪತ್ರೆಗೆ ನಮ್ಮ ತಜ್ಞರ ತಂಡ ಮತ್ತು ಮೂಲಸೌಕರ್ಯವನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ತ್ವರಿತ ಸೇವೆ ಮತ್ತು ತುರ್ತು ವೈದ್ಯಕೀಯ ಸೇವೆಯ ಉತ್ತಮ ಸೌಲಭ್ಯವನ್ನು ಕಲ್ಪಿಸಿದ್ದೇವೆ” ಎಂದರು.
ಶ್ರೀ ಸಾಯಿ ಆಸ್ಪತ್ರೆಯು ಈಗ , 24×7 ತುರ್ತು ವೈದ್ಯಕೀಯ ಸೇವೆ ಒದಗಿಸಲು ಎಲ್ಲಾ ಸೌಕರ್ಯವನ್ನು ಹೊಂದಿದೆ. ತರಬೇತಿ ಪಡೆದ ತುರ್ತು ತಜ್ಞ ವೈದ್ಯರು ಟ್ರಾಮಾ (ಆಘಾತ), ಕಾರ್ಡಿಯಾಕ್, ನರ ಸಂಬಂಧಿತ ಸಮಸ್ಯೆ, ಪಾಲಿ ಟ್ರಾಮಾ ಮತ್ತು ಇನ್ನೀತರ ತುರ್ತು ವೈದ್ಯಕೀಯ ಪರಿಸ್ಥಿತಿ ನಿಭಾಯಿಸಲು ಲಭ್ಯವಿರುತ್ತಾರೆ. ಈ ಪಾಲುದಾರಿಕೆಯು ಸುಗಮವಾದ, ಮುಂದುವರಿದ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಭಾಗದ ಜನರಿಗೆ ಒದಗಿಸಲು ನೆರವಾಗಲಿದೆ. ಜೊತೆಗೆ ರೋಗಿಗಳು ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಜೀವ ರಕ್ಷಕ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸುತ್ತದೆ.
ಶ್ರೀ ಸಾಯಿ ಆಸ್ಪತ್ರೆಯು ತುರ್ತು ಮತ್ತು ಕ್ರಿಟಿಕಲ್ ಕೇರ್ ಸೇವೆ , ಐಸಿಯು (ಇಂಟೆನ್ಸಿವ್ ಕೇರ್ ಯುನಿಟ್), ಆಪರೇಶನ್ ಥಿಯೇಟರ್, ಎಕ್ಸ್ ರೇ , ಡಯಾಗ್ನೊಸ್ಟಿಕ್ ಲ್ಯಾಬೊರೆಟರಿ, ಫಿಸಿಯೊಥೆರಪಿ ವಿಭಾಗ, ಸ್ಕ್ಯಾನಿಂಗ್ ಮತ್ತು ಇಮೇಜಿಂಗ್ ಸೇವೆ, ವಿಶೇಷ ವಾರ್ಡ್ ಮತ್ತು ಡಿಲಕ್ಸ್ ರೂಮ್, ಮಹಿಳೆ ಮತ್ತು ಪುರುಷರ ಜನರಲ್ ವಾರ್ಡ್, ಡೇ ಕೇರ್ ಯುನಿಟ್ ಸೇರಿ ಹಲವು ಸೌಲಭ್ಯಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
Comments are closed.