ಕರಾವಳಿ

ಕಾರ್ಕಳ: ಸೂಪರ್ ವೈಸರ್ ಎಂದು ಹೇಳಿಕೊಂಡು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಳೆದೊಯ್ದ ಆರೋಪಿ ಬಂಧನ

Pinterest LinkedIn Tumblr

ಉಡುಪಿ: ಮನೆಯ ಅಂಗಳದಲ್ಲಿ ಕುಳಿತಿದ್ದ 80 ವರ್ಷದ ಮಹಿಳೆಗೆ ‘ತಾನು ಕಾರ್ಕಳದ ಸೂಪರ್ ವೈಸರ್. ಇಲ್ಲಿ ಹತ್ತಿರ ಮನೆ ಉಂಟಾ, ನಿಮ್ಮ ಮನೆಯಲ್ಲಿ ಸಿಸಿ ಕ್ಯಾಮರಾ ಉಂಟಾ’ ಎಂದು ಹೇಳಿ ಅವರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಆರೋಪಿಯನ್ನು ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿಯ ಸುನಿಲ್ ರಮೇಶ್ ಲಮಾಣಿ(29) ಬಂಧಿತ ಆರೋಪಿಯಾಗಿದ್ದು ಕಳವುಗೈದ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ 80 ವರ್ಷದ ಮಹಿಳೆ ಮನೆಗೆ ಸೆ.9 ಮಂಗಳವಾರ  ಅಪರಿಚಿತ ವ್ಯಕ್ತಿಯೋರ್ವ ಸಂಜೆ ಹೊತ್ತಿಗೆ ಬಂದು ತಾನು ಕಾರ್ಕಳದ ಸೂಪರ್ ವೈಸರ್ ಎಂದು ಹೇಳಿ ಇಲ್ಲಿ ಹತ್ತಿರ ಮನೆ ಉಂಟಾ, ನಿಮ್ಮ ಮನೆಯಲ್ಲಿ ಸಿಸಿ ಕ್ಯಾಮರಾ ಉಂಟಾ” ಎಂದು ವಿಚಾರಿಸಿ ಕೆಲ ಸಮಯ ಅಲ್ಲಿಯೇ ಕುಳಿತು ಕತ್ತಲಾಗುತ್ತಿದ್ದಂತೆ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಅವರ ಕತ್ತಿನಲ್ಲಿದ್ದ ಸುಮಾರು 25 ಗ್ರಾಂ ತೂಕದ ಚಿನ್ನದ ರೋಪ್ ಚೈನನ್ನು ಕದ್ದು ಪರಾರಿಯಾಗಿದ್ದ. ಕುಕೃತ್ಯದ ವೇಳೆ ಕಳ್ಳನ ಕೈಯಿಂದ ತನ್ನ ಚಿನ್ನದ ಸರವನ್ನು ರಕ್ಷಿಸುವಾಗ ನೆಲಕ್ಕೆ ಬಿದ್ದು ಮಹಿಳೆಯ ಹಣೆ, ತಲೆ,ಬಲ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು ಕೆಲ ಹೊತ್ತಿನ ಬಳಿಕ ಅಲ್ಲಿಗೆ ಸತೀಶ್‌ ಪೂಜಾರಿ ಅವರು ಗಾಯಗೊಂಡಿದ್ದ ಮಹಿಳೆಯನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಅದರಂತೆ ಪ್ರಕರಣದ ತನಿಖೆ ಕೈಗೆತ್ತಿಗೊಂಡ ಸಿಪಿಐ ಕಾರ್ಕಳ ಡಿ. ಮಂಜಪ್ಪ ನೇತೃತ್ವದಲ್ಲಿ ಅಜೆಕಾರು ಪಿಎಸ್‌ಐ ಮಹೇಶ್‌ ಹಾಗೂ ಸಿಬ್ಬಂದಿಯವರ ತಂಡ ಆರೋಪಿಯನ್ನು ಬಂಧಿಸಿ ಆತನಿಂದ ಕಳವು ಮಾಡಲಾದ ಚಿನ್ನದ ರೋಪ್ ಚೈನನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.