ಉಡುಪಿ: ಮೀನುಗಾರಿಕೆ ತೆರಳಿದ್ದ ವೇಳೆ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದ ಪರಿಣಾಮ ಓರ್ವ ಮೀನುಗಾರ ಮೃತಪಟ್ಟು, ಇಬ್ಬರು ಪ್ರಾಣಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಸಾಸ್ತಾನದ ಕೋಡಿತಲೆ ಸೀತಾನದಿ ಹೊಳೆಯ ಅಳಿವೆ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಮೃತಪಟ್ಟ ಮೀನುಗಾರ ಶರತ್ ಖಾರ್ವಿ (27) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಅಕ್ಷಯ ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ಶರತ್ ಖಾರ್ವಿ ಮೀನುಗಾರಿಕೆ ತೆರಳಿದ್ದರು. ಈ ಸಂದರ್ಭ ಅಳಿವೆ ಭಾಗದಲ್ಲಿ ತೆರೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೂವರು ನೀರುಪಾಲಗಿದ್ದರು. ಅಕ್ಷಯ ಖಾರ್ವಿಯವರನ್ನು ಬೇರೆ ದೋಣಿಯವರು ರಕ್ಷಿಸಿ ದಡಕ್ಕೆ ಕರೆತಂದಿದ್ದು ಮಂಜುನಾಥ್ ಖಾರ್ವಿಯವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಬಗ್ಗೆ ವರದಿಯಾಗಿದೆ.
ದೋಣಿ ಅವಘಡದಲ್ಲಿ ಪಾರಾದ ಗಾಯಾಳು ಮಂಜುನಾಥ್ ಖಾರ್ವಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೋಣಿ ಸಮುದ್ರ ಪಾಲಾಗಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.