ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು ಇಂದು ಕಾರ್ಕಳದ ಕಂಪನ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್(46) ಎಂಬಾತನಿಗೆ ಗೂಂಡಾ ಕಾಯ್ದೆ ಅಡಿ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ. ಪೊಲೀಸರು ಈತನನ್ನು ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಕುಖ್ಯಾತ ಗರುಡ ಗ್ಯಾಂಗ್ನ ಸಕ್ರೀಯ ಸದಸ್ಯನೆನ್ನಲಾದ ಕಬೀರ್, 2005 ರಿಂದ ಇಲ್ಲಿಯ ತನಕ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮುಂತಾದ 17 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇವುಗಳ ಪೈಕಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ್ದು, 8 ಪ್ರಕರಣಗಳಲ್ಲಿ ಖುಲಾಸೆ ಹೊಂದಿರುತ್ತಾನೆ. ಮೂರು ಪ್ರಕರಣಗಳಲ್ಲಿ ರಾಜಿ ಮಾಡಿಕೊಂಡಿದ್ದು, ಎರಡು ಪ್ರಕರಣಗಳು ನ್ಯಾಯಾಲಯ ವಿಚಾರಣೆಯಲ್ಲಿವೆ. ಉಳಿದ ಎರಡು ಪ್ರಕರಣಗಳು ಪೊಲೀಸ್ ತನಿಖೆಯಲ್ಲಿದೆ.
ಈತನು ಉಡುಪಿ ಜಿಲ್ಲೆಯ ಕಾರ್ಕಳ ನಗರ, ಹಿರಿಯಡ್ಕ ಪಡುಬಿದ್ರಿ, ಮಣಿಪಾಲ, ಶಿರ್ವ, ಕಾಪು ಠಾಣೆಗಳ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ಕೊಪ್ಪ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು, ಮಂಗಳೂರು ನಗರ ವ್ಯಾಪ್ತಿಯ ಸುರತ್ಕಲ್ ಠಾಣೆಯ ಪ್ರಕರಣಗಳಲ್ಲೂ ಭಾಗಿಯಾಗಿದ್ದಾನೆ. ಈತ ಗರುಡ ಗ್ಯಾಂಗ್ನ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.
Comments are closed.