ಉಡುಪಿ: ಉಡುಪಿ ಜಿಲ್ಲೆಯ ಕೊರಗ ಸಮುದಾಯದ ಶಿಕ್ಷಣ, ನಿರುದ್ಯೋಗ, ಕೃಷಿ ಭೂಮಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಇಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.

ಶಿಕ್ಷಣ ಪಡೆದ ಕೊರಗ ಸಮುದಾಯದ ಯುವಜನರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಪಡೆಯಲು ಇಂದಿಗೂ ಕೂಡ ಸಾಧ್ಯವಾಗಿಲ್ಲ. ಸಮುದಾಯದ ಯುವಜನರು ಉದ್ಯೋಗವಿಲ್ಲದೆ ಮಾನಸಿಕ ವಾಗಿ ಒತ್ತಡದಿಂದ ಆತ್ಮವಿಶ್ವಾಸವನ್ನು ಕಳೆದುಕೊಂಡು ಬದುಕುವಂತಾಗಿದೆ. ಇದಲ್ಲದೆ ಪದವಿ ಪಡೆದ ಯುವಜನರನ್ನು ಕೂಡ ಕೇವಲ ಗ್ರಾಪಂ, ಪಟ್ಟಣ ಪಂಚಾಯತ್, ಪುರಸಭೆ ನಗರಸಭೆಗಳಲ್ಲಿ ಸ್ವಚ್ಚತಾ ಕೆಲಸಗಳಿಗೆ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಸಮುದಾಯದ ಯುವಜನರು ದುಶ್ಚಟಗಳಿಗೆ ಬಲಿಯಾಗಿ ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗಿ ಜನಸಂಖ್ಯೆ ತೀವ್ರ ಗತಿಯಲ್ಲಿ ಇಳಿಮುಖ ವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೊರಗ ಸಮುದಾಯ ಅಜಲು ಅಸ್ಪೃಶ್ಯತೆಯ ಕಾರಣದಿಂದಾಗಿ ಯಾವುದೇ ಸ್ವ ಉದ್ಯೋಗಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರಕಾರದ ಬೇರೆ ಬೇರೆ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ್ದರು ಇತರ ಬಲಾಡ್ಯ ಬುಡಕಟ್ಟು ಸಮುದಾಯಗಳ ಕಾರಣಗಳಿಂದಾಗಿ ನಮ್ಮ ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಆದ್ದರಿಂದ ನಮ್ಮ ಸಮುದಾಯದ ಯುವಜನರಿಗೆ ಉದ್ಯೋಗದ ಅವಕಾಶಕ್ಕಾಗಿ ಕ್ರಮ ಕೈಗೊಳ್ಳಬೇಕು.
ಕನಿಷ್ಠ ಒಂದು ಎಕರೆ ಭೂಮಿಯ ಹಕ್ಕುಪತ್ರವನ್ನು ಉಡುಪಿ ಜಿಲ್ಲೆಯ ಒಂದಷ್ಟು ಕುಟುಂಬಗಳಿಗೆ ವಿತರಿಸ ಲಾಗಿದ್ದು, ಇನ್ನು ಉಳಿದ ಸುಮಾರು 800 ಭೂರಹಿತ ಕುಟುಂಬಗಳನ್ನು ಗುರುತಿಸಿ ಫಲಾನುಭವಿಗಳ ದರ್ಕಾಸ್ ಅರ್ಜಿ ಯನ್ನು ಭರ್ತಿ ಮಾಡಿ ಆಯಾ ತಾಲೂಕಿನ ತಹಶೀಲ್ದಾರರಿಗೆ ಸಲ್ಲಿಸಲಾಗಿದೆ. ಆದರೆ ಕಳೆದ 3 ವರ್ಷಗಳಿಂದ ನಮ್ಮ ಅರ್ಜಿಯನ್ನು ತಹಸಿಲ್ದಾರರು ಪರಿಗಣಿಸದೆ ಒಂದು ಎಕರೆ ಭೂಮಿಯನ್ನು ವಿತರಿಸಿಲ್ಲ. ಆದುದರಿಂದ ತಾವು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೈಗೊಳ್ಳಬೇಕು. ಕನಿಷ್ಠ ಒಂದು ಎಕರೆ ಭೂಮಿ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು.
ಉಡುಪಿ ಜಿಲ್ಲೆಯಲ್ಲಿ ಸುಮಾರು 80 ರಿಂದ 100 ಕುಟುಂಬಗಳು ಪಡಿತರ ಚೀಟಿ ಇಲ್ಲದೆ ಸರಕಾರದ ಸೌಲಭ್ಯ ವಂಚಿತರಾಗಿದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ಆದ್ಯತೆಯಲ್ಲಿ ಹೊಸ ಪಡಿತರ ಚೀಟಿ ಪಡೆಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ, ಸಂಯೋಜಕ ಕೆ.ಪುತ್ರ, ಮುಖಂಡರಾದ ಬೊಗ್ರ ಕೊಕ್ಕರ್ಣೆ, ಶೀನ ಬೆಳ್ಳಣ್, ಪ್ರೀತಿ, ಸುನೀತಾ, ಪದ್ಮ ಸುಪ್ರಿಯಾ, ಲಾವಣ್ಯ ಪುಷ್ಪ, ಚಂದ್ರಾವತಿ, ನಿಖಿತಾ, ಹರೀಶ್, ಕಾರ್ಯಕರ್ತ ನರಸಿಂಹ ಪೆರ್ಡೂರು ಉಪಸ್ಥಿತರಿದ್ದರು.
Comments are closed.