ಕರಾವಳಿ

ಕಾಸರಗೋಡಿನಲ್ಲಿ ತಾಯಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ‌ ಮಗನನ್ನು ಬೈಂದೂರು ಸಮೀಪ ಪತ್ತೆಹಚ್ಚಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ ಉಡುಪಿ‌ ಪೊಲೀಸರು!

Pinterest LinkedIn Tumblr

ಕುಂದಾಪುರ: ಸ್ವಂತ ಮಗನೇ ತಾಯಿಯನ್ನು ಕೊಂದು ಬೆಂಕಿ ಹಚ್ಚಿ ಸುಟ್ಟು ಹಾಕಿ‌ ಪರಾರಿಯಾದ ಘಟನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿಯಲ್ಲಿ ಗುರುವಾರ ನಡೆದಿದ್ದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಉಡುಪಿ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಕೊಲ್ಲೂರು-ಬೈಂದೂರಿನತ್ತ ಪರಾರಿಯಾಗುತ್ತಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.

ವರ್ಕಾಡಿ ನಲ್ಲೆಂಗಿಯ ಮೆಲ್ವಿನ್ ಮೊಂತೇರೊ (38) ಬಂಧಿತ ಆರೋಪಿ. ಈತ ತನ್ನ ತಾಯಿ ಹಿಲ್ದಾ ಮೊಂತೇರೊ ( 59) ಎನ್ನುವರನ್ನು ಕೊಂದು ಸುಟ್ಟ ಬಳಿಕ ಮನೆ ಸಮೀಪದ 30 ವರ್ಷ ಪ್ರಾಯದ ಮಹಿಳೆಗೆ ಮನೆಗೆ ಕರೆದು ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಕ್ಷಿಪ್ರ ಕಾರ್ಯಾಚರಣೆ: ಕೊಲೆಕೃತ್ಯ ನಡೆಸಿದ ಬಳಿಕ ಆತ ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು ಈತ ಬಸ್ ಮೂಲಕ ಉಡುಪಿ-ಕುಂದಾಪುರ ಮಾರ್ಗವಾಗಿ ಕೊಲ್ಲೂರಿನತ್ತ ಸಾಗುತ್ತಿರುವುದು ತಾಂತ್ರಿಕ ಮಾಹಿತಿಗಳಿಂದ ಲಭಿಸಿತ್ತು. ಅಂತೆಯೇ ಕಾಸರಗೋಡು ಪೊಲೀಸರು ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರಿಗೆ ಮಾಹಿತಿ ನೀಡಿದ್ದರು. ಮಂಜೇಶ್ವರ ಪೊಲೀಸರ ಒಂದು ತಂಡ ಆರೋಪಿಯನ್ನು ಬೆನ್ನತ್ತಿ ಬಂದಿತ್ತು.

ಕೊಲ್ಲೂರಿಗೆ ಟಿಕೆಟ್ ಮಾಡಿದ್ದ ಆರೋಪಿ!: ಕುಂದಾಪುರಕ್ಕೆ ಬಂದಿಳಿದಿದ್ದ ಆರೋಪಿ ಅಲ್ಲಿಂದ ಕೊಲ್ಲೂರಿಗೆ ತೆರಳುವ ಖಾಸಗಿ ಬಸ್ ಏರಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಈ ಬಗ್ಗೆ ಕೊಲ್ಲೂರು ಪೊಲೀಸರು ಅಲರ್ಟ್ ಆಗಿದ್ದರು. ಒಂದೊಮ್ಮೆ ಆತ ದಾರಿ‌ಮಧ್ಯೆ ಇಳಿದು ಬೈಂದೂರಿನತ್ತ ಸಾಗುವ ಸಾಧ್ಯತೆಗಳೂ ಇದ್ದ ಹಿನ್ನೆಲೆ ಬೈಂದೂರು ಪೊಲೀಸರು ಸನ್ನಧ್ಧರಾಗಿದ್ದರು. ಅಷ್ಟರಲ್ಲಾಗಲೆ ಕಾಸರಗೋಡು ಪೊಲೀಸ್ ತಂಡ ಬೈಂದೂರಿನತ್ತ ಆಗಮಿಸಿತ್ತು. ಇದೆಲ್ಲದರ ನಡುವೆ ಕೊಲ್ಲೂರಿಗೆ ಬಸ್ ಟಿಕೆಟ್ ಮಾಡಿದ್ದ ಆರೋಪಿ ಕೊಲ್ಲೂರಿನಿಂದ ಅನತಿ ದೂರದಲ್ಲಿರುವ ಹಾಲ್ಕಲ್ ಎಂಬಲ್ಲಿ ಇಳಿದಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತಲೆ ಹಾಲ್ಕಲ್‌ನಲ್ಲಿ ಸ್ಥಳೀಯರನ್ನು ವಿಚಾರಿಸಿದ್ದು ಆತ ಕೊಲ್ಲೂರು-ಬೈಂದೂರು ರಸ್ತೆ ಮೂಲಕ ಬೈಂದೂರು ಕಡೆ ತೆರಳಿರುವುದಾಗಿ ಮಾಹಿತಿ ನೀಡಿದ್ದರು.

ಬೈಂದೂರು ಭಾಗದಲ್ಲಿ ಕಾರ್ಮಿಕನಾಗಿದ್ದ ಆರೋಪಿ: ಕೊಲ್ಲೂರಿನಿಂದ ಪೊಲೀಸರ ತಂಡ, ಬೈಂದೂರಿನ ತಂಡ ಹಾಗೂ ಕಾಸರಗೋಡು ಪೊಲೀಸರು ಆರೋಪಿಯನ್ನು ಒಂದಷ್ಟು ಮಾಹಿತಿಗಳ ಆಧಾರದಲ್ಲಿ ಬೈಂದೂರಿನ ಕಾಲ್ತೋಡು ಸಮೀಪದ ಬ್ಯಾಟ್ಯಣಿ ಸಮೀಪದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿ‌ ಮೆಲ್ವಿನ್ ಕೆಲವು ಸಮಯಗಳ ಹಿಂದೆ ಈ ಭಾಗದಲ್ಲಿ ಕೂಲಿ ಕಾರ್ಮಿಕನಾಗಿ ದುಡಿದಿದ್ದರಿಂದ ಈ ಪರಿಸರದ ಕೊಂಚ ಪರಿಚಯ ಆತನಿಗಿತ್ತು. ಹೀಗಾಗಿ ಇಲ್ಲಿ ಬಂದು ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದ.

ಈ ಕಾರ್ಯಾಚರಣೆಯಲ್ಲಿ‌ ಬೈಂದೂರು ಪಿಎಸ್ಐ ತಿಮ್ಮೇಶ್ ಬಿ.ಎನ್., ಕೊಲ್ಲೂರು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ಸಿಬ್ಬಂದಿಗಳಾದ ನಾಗೇಂದ್ರ, ರಾಮ ಪೂಜಾರಿ, ವಿಜಯ, ಬೈಂದೂರು ಠಾಣೆ ಸಿಬ್ಬಂದಿಗಳಾದ ಪರಯ್ಯ ಮಠಪತಿ, ಮಾಳಪ್ಪ ದೇಸಾಯಿ, ಚಿದಾನಂದ, ಹೇಮರಾಜ್ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.