ದುಬೈ: ಹತ್ತರ ಹರುಷದ ಹೊತ್ತಿನಲ್ಲಿ ಹಿಂದೆ ತಿರುಗಿ ನೋಡಿದಾಗ…ಯು.ಎ.ಇ.ಯ ಸರ್ವಪ್ರಥಮ ಮತ್ತು ಏಕೈಕ ಸಮಗ್ರ ಯಕ್ಷಗಾನ ಅಭ್ಯಾಸ ಕೇಂದ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಎಳೆಯ ಮಕ್ಕಳಿಂದ ಹಿರಿಯ ಹವ್ಯಾಸಿ ಕಲಾವಿದರಿಗೆ ಶಾಸ್ತ್ರೀಯ ಯಕ್ಷಗಾನ ಕಲೆಯನ್ನು ಕಲಿಸಿ, ಪರಿಪಕ್ವತೆಯನ್ನು ಸಾಧಿಸುವಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ – ಯು.ಎ.ಇ. ಕಳೆದ ಹತ್ತು ವರ್ಷಗಳಿಂದ ದುಬಾಯಿಯ ಕಲಾ ತಪೋಭೂಮಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಪ್ರತಿವರ್ಷ ವಿವಿಧ ಕಥಾ ಪ್ರಸಂಗಗಳನ್ನು ಆಯ್ಕೆ ಮಾಡಿಕೊಂಡು ಅದ್ಧೂರಿಯಾಗಿ ಪ್ರದರ್ಶನ ಮಾಡಿಕೊಂಡು ಬಂದು ಇದೀಗ ದಶಮಾನೋತ್ಸವದ ಸಂಭ್ರಮದಲ್ಲಿರುವ ಸಾಧನೆಯ ಯಶೋಗಾಥೆಯ ವಿಶೇಷ ಲೇಖನವನ್ನು ಬಿ. ಕೆ. ಗಣೇಶ್ ರೈ – ದುಬಾಯಿ ಬರೆದಿದ್ದಾರೆ.

ಪ್ರಪಂಚ ಭೂಪಟದಲ್ಲಿ ವಾಣಿಜ್ಯ ನಗರಿಯಾಗಿ ಗುರುತಿಸಿಕೊಂಡ, ಸಂಯುಕ್ತ ಅರಬ್ ಸಂಸ್ಥಾನವೆಂಬ ಮಾಯಾನಗರಿ, ಸಾಂಸ್ಕೃತಿಕವಾಗಿಯೂ ಸಂಪದ್ಭರಿತವಾಗಿ ಬೆಳೆದು ನಿಂತ ಗಲ್ಫ್ ರಾಷ್ಟ್ರ, ಅನಿವಾಸಿ ಭಾರತೀಯರ ನೆಚ್ಚಿನ ತಾಣ. ಇವರಲ್ಲಿ ದೊಡ್ಡ ಸಂಖ್ಯೆಯಲ್ಲಿ ಯಕ್ಷಗಾನವೇ ಉಸಿರಾಗಿ ಬದುಕುವ ನಮ್ಮ ಕರಾವಳಿ ಬಯಲುಸೀಮೆಯ ಕರ್ನಾಟಕದ ಮಂದಿಯೂ ಇದ್ದಾರೆ. ಭವ್ಯ ಭಾರತದ ಪ್ರಾದೇಶಿಕ ಸಂಸ್ಕೃತಿಯ ಹರಿಕಾರರಾಗಿ ಇಲ್ಲಿಯ ಮಂದಿ ತಮ್ಮ ಬಿಡುವಿನ ಅವಧಿಯನ್ನು ಸಾರ್ಥಕಪಡಿಸಿ ಕೊಂಡಾಗ ಇಲ್ಲಿಯ ಯಕ್ಷರಸಿಕರೂ ಹಿಂದೆ ಬಿದ್ದದ್ದಿಲ್ಲ. 1980ರಷ್ಟು ಹಿಂದೆಯೇ ಪಣಂಬೂರು ವೆಂಕಟರಾಯರ ಐತಾಳರ ನೇತೃತ್ವದ, ಬಲಿಪ ನಾರಾಯಣ ಭಾಗವತರ ಸಾರಥ್ಯದ ತೆಂಕುತಿಟ್ಟು ತಂಡ ಗಲ್ಫ್ ಪ್ರವಾಸ ಕೈಗೊಂಡ ದಾಖಲೆ ಸಿಗುತ್ತದೆ. ಶಿವರಾಮ ಕಾರಂತರ ಬಡುಗುತಿಟ್ಟು ತಂಡವೂ ಮರುಭೂಮಿಯಲ್ಲಿ ಯಕ್ಷಕಲೆಯ ಸೆಲೆಯನ್ನು ಚಿಮ್ಮಿಸಿದೆ. ಆ ಬಳಿಕ ಅನೇಕಾನೇಕ ತೆಂಕು-ಬಡಗುತಿಟ್ಟಿನ ಅಪ್ರತಿಮ ಕಲಾವಿದರ ತಂಡಗಳು ಇಲ್ಲಿಯ ಕಲಾರಸಿಕರ ಹಸಿವಡಗಿಸುವ ಪ್ರಯತ್ನ ಮಾಡಿದೆ. ಇಲ್ಲಿಯವರೆ ತಂಡ ಕಟ್ಟಿ ಪ್ರದರ್ಶನ ಕೊಡುವ ಯತ್ನಗಳೂ ನಡೆದಿದೆ.
ಕರಾವಳಿ ಕರ್ನಾಟಕ ಮತ್ತು ಬಯಲುಸೀಮೆಯ ಉದ್ದಕ್ಕೂ ಪಸರಿಸಿದ ಯಕ್ಷಗಾನ, ಜಾನಪದ ನೆಲೆಗಟ್ಟಿನಲ್ಲಿ ಕುಡಿವಡೆದು, ಶಾಸ್ತ್ರೀಯ ಕಲೆಯಾಗಿ ಅರಳಿನಿಂತು, ಮೂಡಲಪಾಯ – ಪಡುವಲಪಾಯವಾಗಿ ಟಿಸಿಲೊಡೆದು ತೆಂಕುತಿಟ್ಟು, ಬಡಗುತಿಟ್ಟು, ದೊಡ್ಡಾಟ, ಸಣ್ಣಾಟ, ಇತ್ಯಾದಿ ಇತ್ಯಾದಿ ಪ್ರಾದೇಶಿಕ ಪ್ರಕಾರಗಳಾಗಿ ಮೈದಳೆದು ಜಗದಗಲ ವಿಸ್ತರಿಸಿ ನಿಂತಿದೆ. ಶ್ರೀಮಂತ ರಾಜಕಲೆಯೆನಿಸಿ ವಿಶ್ವಮಾನ್ಯತೆ ಪಡೆದಿದೆ. ಇಂತಹ ಪರಿಪೂರ್ಣ ಕಲೆಯನ್ನು ಯು ಎ ಇ., ಯಲ್ಲಿ ಸಮಗ್ರವಾಗಿ ಕಲಿಸುವ ವ್ಯವಸ್ಥೆಯಾಗಲಿ-ವ್ಯವಧಾನವಾಗಲೀ ಇಲ್ಲದ ಕಾಲದಲ್ಲಿ – ಕಲಿಕಾ ತರಗತಿಯ ಅಗತ್ಯವನ್ನು ಮನಗಂಡು ಯು ಎ ಇ.,ಯಲ್ಲಿಯೇ ಪ್ರಥಮ ಬಾರಿಗೆ, 2015ನೇ ಇಸವಿ ಜೂನ್ 16ರಂದು, ಗುರುಗಳಾದ ಶೇಖರ ಡಿ. ಶೆಟ್ಟಿಗಾರರ ಪರಿಕಲ್ಪನೆ, ಮಾರ್ಗದರ್ಶನ, ನಿರ್ದೇಶನದಲ್ಲಿ “ಯಕ್ಷಗಾನ ಅಭ್ಯಾಸ ತರಗತಿ” ಎನ್ನುವ ಶಿರೋನಾಮೆಯಿಂದ ಈ ಕಲಿಕಾ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಗುರುಗಳ ನಿವಾಸದಲ್ಲಿ ಆರಂಭಗೊಂಡು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ, ನಮ್ಮ ಮನೆಗೆ, ಅಲ್ಲಿಂದ ಬಿಲ್ವ ಸ್ಕೂಲ್ ಮತ್ತು ಈಗ ವಕ್ವಾಡಿ ಶ್ರೀ ಪ್ರವೀಣ್ ಶೆಟ್ಟರು ವ್ಯವಸ್ಥೆಗೊಳಿಸಿದ, ಫಾರ್ಚೂನ್ ಕ್ಲಾಸಿಕ್ನ ಕೊಠಡಿಯಲ್ಲಿ “ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ.,” ಎಂಬ ನಾಮಾಂತರದಿಂದ ಉಚಿತ ತರಗತಿ ಮುಂದುವರಿದು ಬರುತ್ತಿದೆ. ಅದುತನಕ ಇಲ್ಲಿ, ಪ್ರದರ್ಶನದ ಸೀಮಿತ ಉದ್ದೇಶದಿಂದ ಅಲ್ಪಸ್ವಲ್ಪ ಅಭ್ಯಾಸ ನಡೆಯುತ್ತಿದ್ದರೂ, ನಿರಂತರವಾಗಿ, ವಿಸ್ತೃತವಾಗಿ ಮತ್ತು ಸಮಗ್ರವಾಗಿ ಯಕ್ಷಗಾನ ನಾಟ್ಯ -ಹಿಮ್ಮೇಳ-ಮುಮ್ಮೇಳಗಳ ಸಮಗ್ರ ಅಧ್ಯಯನದ ಅವಶ್ಯಕತೆ ಪೂರೈಸಿದ ಯುಎಇ,ಯ ಪ್ರಥಮ ತಂಡ ಎಂಬ ಹಿರಿಮೆಗೆ ಅಭ್ಯಾಸ ಕೇಂದ್ರ ಪಾತ್ರವಾಗಿದೆ. ನಾಟ್ಯ-ಭಾಗವತಿಕೆ-ಚೆಂಡೆ-ಮದ್ದಳೆಗಳ ಮೂಲ ಪ್ರಾಥಮಿಕ ಪಾಠ, ನಂತರದ ಹಂತದಲ್ಲಿ ಪ್ರೌಢ ಪಾಠಗಳು, ಅಭ್ಯಾಸಿಗಳಿಗೆ ಪ್ರದರ್ಶನದ ಅವಕಾಶ, ಅಭಿನಯ-ಮಾತುಗಾರಿಕೆಗಳ ತರಬೇತಿ, ಪೂರ್ವರಂಗ-ಉತ್ತರರಂಗ ವೈವಿಧ್ಯಗಳ ತರಬೇತಿ, ರಂಗಕ್ರಮ-ಪ್ರಸಂಗ ಪಠ್ಯಗಳ ಅಭ್ಯಾಸ, ರಾಮಾಯಣ-ಮಹಾಭಾರತ-ಭಗವದ್ಗೀತೆ-ಪುರಾಣ, ಕಾವ್ಯ, ಕಥನಗಳ ಅಧ್ಯಯನ, ವರ್ಣ-ವಸ್ತ್ರಾಲಂಕಾರ ಶಿಬಿರಗಳ ಮೂಲಕ ಪ್ರಸಾಧನ-ವೇಷಭೂಷಣಗಳ ತರಬೇತಿ. ತಾಳಮದ್ದಳೆ ಕೂಟ, ಯಕ್ಷಗಾನ ರಸಪ್ರಶ್ನೆ, ವಿವಿಧ ಹಂತಗಳ ವಾರ್ಷಿಕ ಪರೀಕ್ಷೆ, ಕರ್ನಾಟಕ ಸರಕಾರ ವ್ಯಾಪ್ತಿಯ ಯಕ್ಷಗಾನ ಅಕಾಡೆಮಿ ಪ್ರಕಟಿತ ಪಠ್ಯಗಳ ಅಳವಡಿಕೆ, ಪರೀಕ್ಷೆಗಳಿಗೆ ತಯಾರಿ, ವಾರ್ಷಿಕ ಸಾಧನಾ ಸಂಭ್ರಮಗಳ (2017 ರಿಂದ) ಮೂಲಕ ವರ್ಷಂಪ್ರತಿ ಕಲಿತ ಪಾಠಗಳ ಪ್ರಯೋಗವಕಾಶ ಹೀಗೆ ಕೇಂದ್ರದ ಕಾರ್ಯಕ್ರಮಗಳ ಪಟ್ಟಿ ದೊಡ್ಡದು, ವೈವಿಧ್ಯಪೂರ್ಣವಾದುದು. ಇವೆಲ್ಲದರ ಜೊತೆಗೆ ಯಕ್ಷಗಾನ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ವರ್ಷಪೂರ್ತಿ ಕಲಿಕೆಯ ಕನ್ನಡ ಭಾಷಾ ತರಗತಿ ಕೇಂದ್ರದ ಹೆಮ್ಮೆಯ ಯೋಜನೆ.
ಕೇಂದ್ರದ ನಾಟ್ಯಗುರುವಾಗಿ ಶ್ರೀಯುತ ಶರತ್ ಕುಡ್ಲರವರು, ಚೆಂಡೆ-ಮದ್ದಳೆ ಗುರುಗಳಾಗಿ ಈ ಹಿಂದೆ ಶ್ರಿಯುತ ಭವಾನಿಶಂಕರ ಶರ್ಮರು ನಡೆಸುತ್ತಿದ್ದ ತರಗತಿಗಳನ್ನು ಶ್ರೀ ಸವಿನಯ ನೆಲ್ಲಿತೀರ್ಥರು ಮುಂದುವರಿಸಿದರೆ, ಭಾಗವತಿಕೆ ಗುರುಗಳಾಗಿ ಶ್ರೀಮತಿ ಭವ್ಯಶ್ರೀ ಕುಲ್ಕುಂದರವರು ಕೇಂದ್ರದ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ. ಐವತ್ತು ಮಂದಿ ಬಾಲ ಕಲಾವಿದರು, ಇಪತ್ತರಿಂದ ಇಪ್ಪತ್ತೈದು ಮಂದಿ ಯುವ, ಹಿರಿಯ ಕಲಾವಿದರು ಕಲಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಕಲಿತ ಇಪ್ಪತ್ತಕ್ಕೂ ಮೇಲ್ಮಟ್ಟ ವಿದ್ಯಾರ್ಥಿಗಳು ಹೆಚ್ಚಿನ ವಿಧ್ಯಾಭ್ಯಾಸ -ಉದ್ಯೋಗ ನಿಮಿತ್ತ ತಾಯ್ನಾಡು, ಮತ್ತಿತರ ದೇಶಗಳತ್ತ ಪಯಣ ಬೆಳೆಸಿದ್ದಾರೆ. ಕೇಂದ್ರದ ಕಾರ್ಯಕ್ರಮಗಳ ಬೆಂಬಲಕ್ಕೆ ಅಪರಿಮಿತ ಸಂಖ್ಯೆಯ ಹೆತ್ತವರು -ಕಾರ್ಯಕರ್ತರ ಪಡೆ ಸದಾ ಸಿದ್ಧವಾಗಿದೆ. ಕ್ರೀಡಾ ಚಟುವಟಿಕೆಗಳಿಗಾಗಿ “ಯಕ್ಷ ಯೋಧಾಸ್” ಸಂಸ್ಥೆ, ಸೇವಾ ಚಟುವಟಿಕೆಗಳಿಗಾಗಿ “ಯಕ್ಷ ಶ್ರೀ ರಕ್ಷಾ ಯೋಜನೆ” ಯ ಮೂಲಕ ಹಿರಿಯ ಕಲಾವಿದರಿಗೆ ನಿಧಿ ಸಹಿತ ಗೌರವಾರ್ಪಣೆ, ವಾರ್ಷಿಕ ಪ್ರಶಸ್ತಿ, ಗುರುಪೂಜೆ, ಶ್ರೀ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಸಹಿತ ವಿಶೇಷ ಹಬ್ಬ ಹರಿದಿನಗಳ ಆಚರಣೆ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಪರಿಚಯ ಮಾಡಿಸುತ್ತಿದೆ.
ಕಳೆದ ಒಂದು ದಶಕದಿಂದ ನಡೆಯುವ ನಮ್ಮ ಈ ಯಕ್ಷಗಾನ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತು ನಮ್ಮ ಎಲ್ಲಾ ಮುಖ್ಯ ಪ್ರಾಯೋಜಕರಿಗೆ ಪ್ರತಿವರ್ಷ ಕಾರ್ಯಕ್ರಮಕ್ಕೆ ಬಂದು ನಮಗೆ ಸಹಕರಿಸಿದ, ಪ್ರೋತ್ಸಾಹಿಸಿದ ಯು.ಎ.ಇ.ಯ ಯಕ್ಷ ಕಲಾಭಿಮಾನಿಗಳಿಗೆ, ಕಲಾ ಪ್ರೋತ್ಸಾಹಕರಿಗೆ ಹಾಗೂ ನಮ್ಮ ಕೇಂದ್ರದ ಎಲ್ಲಾ ಚಟುವಟಿಕೆಗಳನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಿದ ಮಾಧ್ಯಮ ಮಿತ್ರರಿಗೆ ಹೃದಯಾಂತರಾಳದ ಪ್ರೀತಿಯ ನಮಗಳು ಹಾಗೂ ನಿಸ್ವಾರ್ಥವಾಗಿ ದುಡಿದು ಯಕ್ಷಗಾನವನ್ನು ಈ ಮರಳುಭೂಮಿಯಲ್ಲಿ ಬೆಳೆಸಿ, ಉಳಿಸಲು ಶ್ರಮಪಡುವ ನಮ್ಮ ಗುರುಗಳಾದ ಶ್ರೀ ಶೇಖರ್ ಡಿ ಶೆಟ್ಟಿಗಾರ್, ಶ್ರೀ ಶರತ್ ಕುಡ್ಲ ಹಾಗೂ ಎಲ್ಲಾ ಕಾರ್ಯಕರ್ತರಿಗೂ, ಪೋಷಕರಿಗೂ, ಕಲಾವಿದರಿಗೂ, ಬಾಲ ಕಲಾವಿದರಿಗೂ ಶಿರಭಾಗಿ ಮಾಡುವ ನಮಸ್ಕಾರಗಳು. ಇದೀಗ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಸ್ಥೆಗೆ ದಶಮಾನೋತ್ಸವದ ಸಡಗರ. ಹತ್ತರ ಹರುಷದ ಹೊತ್ತಿನಲ್ಲಿ ಹಿಂದೆ ತಿರುಗಿ ನೋಡಿದಾಗ, ಸಾಗಿ ಬಂದ ದಾರಿ, ಸಾಧನೆ ಸಂಭ್ರಮ ಮೂಡಿಸುತ್ತಿದೆ. ಯಕ್ಷಗಾನ ಅಭ್ಯಾಸ ಕೇಂದ್ರದ ಹೆಸರು ಯು. ಎ. ಇ. ಯ ಸರ್ವರ ಮನೆ-ಮನ ತಲುಪಿದೆ. ವಿದ್ವಜ್ಜನರ ಕೊಂಡಾಟಕ್ಕೆ ಕಾರಣವಾಗಿದೆ. ಮುಂಚೂಣಿಯಲ್ಲಿ ನಿಂತ ನಮಗೆ ಸಾರ್ಥಕ್ಯ ಭಾವ. ಮತ್ತಷ್ಟು ಸಾಧನೆಗೆಳಸುವ ಉತ್ಸಾಹ, ಹೆಚ್ಚಿದ ಹೊಣೆಯ ಅರಿವು, ಧನ್ಯತೆ ಸಮ್ಮಿಳಿತ ಭಾವಗಳಿಂದ ನಿರುತ್ತರರು. ಗುರುಗಳಾದ ಶೇಖರ್ ಡಿ ಶೆಟ್ಟಿಗಾರ್ ಚಿಂತನೆಗಳನ್ನು ಚಿಂತೆಯಾಗದಂತೆ ಕಾರ್ಯರೂಪಕ್ಕೆ ತರುವಲ್ಲಿ ಪೂರ್ಣ ಬೆಂಬಲ ಸಂಚಾಲಕ ಕೊಟ್ಟಿಂಜ ದಿನೇಶ ಶೆಟ್ಟಿಯವರದ್ದು. ದೈವಭಕ್ತರು, ನಿಸ್ವಾರ್ಥಿ, ನಿರಂತರ ಕವಲೊಡೆಯದ ನಿಷ್ಠೆಯಿಂದ ಸಂಸ್ಥೆಯ ನೇತೃತ್ವ ವಹಿಸಿ, ಮುನ್ನಡೆಸಿ, ಹೆಸರಿನಂತೆ ದಿನಮಣಿಯಾದವರು. ಹಿರಿಯರು- ಕಿರಯರೆನ್ನುವ ಭೇದವಿಲ್ಲದ ಕಲಾವಿದರ, ಸದಸ್ಯರ, ವಿದ್ಯಾರ್ಥಿಗಳ, ಹೆತ್ತವರ ಬೆಂಬಲ, ಕಾರ್ಯಕರ್ತರ ಕರಗದ ಉತ್ಸಾಹಕ್ಕೆ ಸದಾ ಚಿರಋಣಿ. ದಿನನಿತ್ಯದ ತರಗತಿಗಳಿಗೆ ಸಹಕರಿಸುವ ಕಾರ್ಯಕರ್ತರ ಪಡೆ ಒಂದೆಡೆಯಾದರೆ, ವಾರ್ಷಿಕ ಕಾರ್ಯಕ್ರಮಗಳಿಗಾಗಿ ದುಡಿಯುವ ಪಡೆ ಮಗದೊಂದು. ಜೊತೆಜೊತೆಗೆ ಮಾಧ್ಯಮದವರ ಮಹತ್ತಿಕೆ, ಕಲಾಪೋಷಕರ ಕಾರುಣ್ಯ ಎಲ್ಲದರ ಸಮ್ಮಿಲನ ಈ ವೈಭವದ ದಶಮಾನೋತ್ಸವದ ಸಡಗರ. ವೈಭವದ ಕಾರ್ಯಕ್ರಮ ಸರ್ವ ಸಿದ್ಧತೆಗಳು ಕಲಾಪೋಷಕರ ಸಹಕಾರದಿಂದ ಪ್ರಕ್ಯಾತ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ, ದೇವಿ ಪ್ರಸಾದ್ ಆಳ್ವಾ, ಮಹಿಳಾ ಭಾಗವತರು ಶ್ರೀಮತಿ ಕಾವ್ಯಶ್ರೀ ಕುಲ್ಕುಂದ, ಕಟೀಲು ಮೇಳದ ದೇವಿ ಪಾತ್ರಧಾರಿ ಶ್ರೀ ಅರುಣ್ ಕೋಟ್ಯಾನ್, ಪ್ರಸಿದ್ದ ಚೆಂಡೆ ವಾದಕರು ಶ್ರೀ ಸರಪಾಡಿ ಚಂದ್ರಶೇಖರ್ ಹಾಗುಉ ದುಬಾಯಿಯ ಹಿಮ್ಮೇಳ ಮುಮ್ಮೇಳ ಕಲಾವಿದರಿಂಡ “ಶಿವಾನಿ ಸಿಂಹವಾಹಿನಿ” ಕಥಾಪ್ರಸಂಗ ಹಾಗೂ ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ ಶ್ರೀ ಕಾಸರಗೋಡು ಸುಬ್ರಾಯ ಹೊಳ್ಳರಿಗೆ ನೀಡಿ ಗೌರವಿಸಲಾಗುವುದು.
ದಶಮಾನೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಯು.ಎ.ಇ.ಯ ಹತ್ತು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು, ಶ್ರೀಯುತರುಗಳಾದ ಸರ್ವೋತ್ತಮ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಪುತ್ತಿಗೆ ವಾಸುದೇವ ಭಟ್, ಬಾಲಕೃಷ್ಣ ಸಾಲಿಯಾನ್, ಬಿ. ಕೆ. ಗಣೇಶ್ ರೈ, ಡೋನಿ ಕೊರೆಯಾ, ಶ್ರೀಮತಿ ರೂಪಾ ಕಿರಣ್ ಮತ್ತು ಸಂಸ್ಥೆಗಳಾದ ಕನ್ನಡ ಪಾಠ ಶಾಲೆ ದುಬಾಯಿ, ಶ್ರೀ ರಾಜರಾಜೇಶ್ವರಿ ಭಜನಾ ತಂಡ ಯು.ಎ.ಇ. ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯು.ಎ.ಇ. ಹಾಗೂ ಇನ್ನಿತರ ವೈವಿಧ್ಯ ಕಲಾ ಕಾರ್ಯಕ್ರಮಗಳು ದಿನ ಪೂರ್ತಿ 2025 ಜೂನ್ 29 ರಂದು ಕರಾಮದ ಶೇಖ್ ರಷೀದ್ ಅಡಿಟೋರಿಯಂನಲ್ಲಿ ವೈಭವದ ಆಯೋಜನೆಯ ಮೂಲಕ ಐತಿಹಾಸಿಕ ಸಾಕ್ಷಿಯಾಗಿ ನಿಲ್ಲುವ ಸದವಸರದಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ. ಸಂಸ್ಥೆ ನಡೆದು ಬಂದ ದಾರಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಯಕ್ಷಗಾನ ಪ್ರೇಮಿಗಳ ಮುಂದೆ ಐತಿಹಾಸಿಕ ಸಾಕ್ಷಿಯಾಗಲಿದೆ.
Comments are closed.