ಉಡುಪಿ: ಕಳೆದೆರಡು ದಿನಗಳ ಹಿಂದೆ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ರೆಡಿಯೋ ಕಾಲರ್ ಹೊಂದಿದ ಒಂಟಿ ಸಲಗವು ಮಂಗಳವಾರದಂದು ಶಿವಮೊಗ್ಗ ಜಿಲ್ಲೆ ನಗರ ಅರಣ್ಯ ವ್ಯಾಪ್ತಿಯ ಹುಲಿಕಲ್ ಚೆಕ್ಪೋಸ್ಟ್ ಬಳಿ ಕಾಣಿಸಿಕೊಂಡಿದ್ದು ತರುವಾಯ ಬಾಳೆಬರೆ ಘಾಟಿ ಶ್ರೀ ಚಂಡಿಕಾಂಬ ದೇವಸ್ಥಾನ ಕೆಳಭಾಗದ ಕಾಡು ಪ್ರದೇಶದಲ್ಲಿ ಸಂಚರಿಸಿದೆ. ಕುಂದಾಪುರ-ಸಿದ್ದಾಪುರ-ಹೊಸಂಗಡಿ-ಹುಲಿಕಲ್ ಘಾಟಿ (ಬಾಳೆಬರೆ) ಮೂಲಕ ತೀರ್ಥಹಳ್ಳಿ-ಶಿವಮೊಗ್ಗ ಸಂಪರ್ಕದ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆ ಓಡಾಟವಿದ್ದು ಆತಂಕ ಹೆಚ್ಚಿದೆ. ಆನೆಯ ವಿಡಿಯೋ ವೈರಲ್ ಆಗಿದೆ.

ಕಳೆದ ತಿಂಗಳು ಹಾಸನದಿಂದ ಈ ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಸಿ ಭದ್ರಾ ಅರಣ್ಯ ವಲಯಕ್ಕೆ ಸ್ಥಳಾಂತರಿಸಲಾಗಿದ್ದು ಆನೆ ಅಲ್ಲಿಂದ ಒಂಟಿಯಾಗಿ ತಪ್ಪಿಸಿಕೊಂಡು ತಿರುಗುತ್ತಿದೆ. ಕಳೆದೆರಡು ದಿನಗಳಿಂದ ತೀರ್ಥಹಳ್ಳಿ, ಆರಗ ಮೊದಲಾದೆಡೆ ಆನೆ ಸಂಚಾರ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು ಇದೀಗಾ ರಾಜ್ಯ ಹೆದ್ದಾರಿಯಲ್ಲಿ ಆನೆ ಕಂಡು ವಾಹನ ಸವಾರರು ಭೀತರಾಗಿದ್ದಾರೆ.
ಸ್ಥಳೀಯ ವಾಸಿಗಳಲ್ಲಿ ಆತಂಕ: ಮಂಗಳವಾರ ಸಂಜೆ ವೇಳೆ ಒಂಟಿ ಆನೆ ಮಾಸ್ತಿಕಟ್ಟೆ ಆಸುಪಾಸು ಓಡಾಡಿದ್ದು ಬಹುತೇಕ ಸಿದ್ದಾಪುರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಾಟಿ ಪ್ರದೇಶದಿಂದ ಆನೆ ಹೊರಬಂದರೆ ಸ್ಥಳೀಯವಾಗಿ ಹಲವಷ್ಟು ಮನೆಗಳು ಇರುವ ಕಾರಣ ಆತಂಕವಿದೆ. ಹೊಸಂಗಡಿ, ಕೆ.ಪಿ.ಸಿ., ಭಾಗಿಮನೆ ಸೇರಿದಂತೆ ಅಮಾಸೆಬೈಲು, ತೊಂಬಟ್ಟು ಭಾಗದ ನಿವಾಸಿಗಳು ಹಾಗೂ ರೈತರು ದಿಗ್ಭ್ರಾಂತರಾಗಿದ್ದಾರೆ.
ಈಗಾಗಾಲೇ ಆನೆ ತಡೆ ಪಡೆ (ಎಲಿಫೆಂಟ್ ಟಾಸ್ಕ್ ಪೋರ್ಸ್), ಅರಣ್ಯ ಇಲಾಖೆ, ವನ್ಯ ಜೀವಿ ವಲಯದ ಅಧಿಕಾರಿ, ಸಿಬ್ಬಂದಿಗಳು ಜಿಪಿಎಸ್ ತಂತ್ರಜ್ಞಾನದ ಮೂಲಕ ಕಾಡಾನೆ ಸಂಚಾರದ ಮಾಹಿತಿ ಪಡೆಯುತ್ತಿದ್ದಾರೆ. ಘಾಟಿಯ ಚಂಡಿಕಾಂಬ ದೇವಸ್ಥಾನದ ಬಳಿ ಸಂಜೆ ವೇಳೆಗೆ ಕೊನೆಯ ಲೊಕೇಶನ್ ಸಿಕ್ಕಿದೆ. ಆಸುಪಾಸಿನ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು. ರಾತ್ರಿ ವೇಳೆ ಮನೆಯಿಂದ ಹೊರಗೆ ಓಡಾಟ ಬೇಡ. ಆನೆ ಸಂಚಾರ ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿ. ವಾಹನ ಸವಾರರು ಎಚ್ಚರಿಕೆಯಿಂದಿರಬೇಕು. ಯಾವುದೇ ಕಾರಣಕ್ಕೂ ಜನರು ಕಾಡಾನೆಗೆ ಪ್ರಚೋದಿಸಬೇಡಿ: ಶಿವರಾಂ ಬಾಬು (ಡಿಸಿಎಫ್ಓ, ಕುದುರೆಮುಖ ವನ್ಯಜೀವಿ ವಿಭಾಗ)
Comments are closed.