ಬೆಂಗಳೂರು: ರಾಜ್ಯದ ಏಳು ಜಿಲ್ಲೆಗಳಲ್ಲಿ ವಿವಿಧ ಸರಕಾರಿ ಅಧಿಕಾರಿಗಳ ಕಚೇರಿಗಳು ಹಾಗೂ ಮನೆಗಳ ಮೇಲೆ ಶನಿವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಉಡುಪಿ, ಗದಗ, ಹಾವೇರಿ ಹಾಗೂ ಧಾರವಾಡದಲ್ಲಿ ದಾಳಿ ನಡೆದಿದೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಬೆಳಗ್ಗೆ ಈ ದಾಳಿ ನಡೆದಿದ್ದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಸಿದ್ದಲಿಂಗಪ್ಪ, ಬಾಗಲಕೋಟೆಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಎಫ್ಡಿಎ ಶೈಲ ಸುಭಾಷ್ ತಂತ್ರಾಣಿ, ಬಳ್ಳಾರಿ ಪಿಡಬ್ಲ್ಯೂಡಿ ಇಲಾಖೆಯ ಎಂಜಿನಿಯರ್ ಅಮೀನ್ ಮುಕ್ತಾರ್ ಅಹ್ಮದ್, ದಾವಣಗೆರೆಯ ಬಾಡಾ ಗ್ರಾಮ ಪಂಚಾಯಿತಿ ಪಿಡಿಒ ರಾಮಕೃಷ್ಣ, ಉಡುಪಿ ಮೆಸ್ಕಾಂನ ಲೆಕ್ಕಪರಿಶೋಧಕ ಗಿರೀಶ್ ರಾವ್, ಗದಗ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಗಂಗಾಧರ ಶಿರೋಳ, ಧಾರವಾಡ ಪಿಡಬ್ಲ್ಯೂಡಿ ಇಲಾಖೆಯ ಮುಖ್ಯ ಎಂಜಿನಿಯರ್ ಎಚ್. ಸುರೇಶ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೋಧನೆ ನಡೆಸಲಾಗಿದೆ.
Comments are closed.