ಮೈಸೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನ ಬಾಕಿಯಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿರುವ ಮೂರ್ತಿ ಆಯ್ಕೆಯಾಗಿದೆ ಎನ್ನಲಾಗುತ್ತಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ‘ಎಕ್ಸ್’ನಲ್ಲಿ ಹರ್ಷ ಹಂಚಿಕೊಂಡಿರುವುದು ಹಾಗೂ ಶುಭಾಶಯ ಕೋರಿರುವುದು ವಿಶೇಷವಾಗಿದೆ.

ಮೂವರು ಶಿಲ್ಪಿಗಳು ಸಿದ್ಧಪಡಿಸಿರುವ ಮೂರ್ತಿಗಳಲ್ಲಿ ಒಂದು ಆಯ್ಕೆಯಾಗಿದೆ. ಆದರೆ, ಯಾವ ಮೂರ್ತಿ ಆಯ್ಕೆಯಾಗಿದೆ ಎಂಬ ವಿಷಯವಾಗಿ ರಾಮಮಂದಿರ ಟ್ರಸ್ಟ್‌ನಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಅರುಣ್ ಸಿದ್ಧಪಡಿಸಿದ ಮೂರ್ತಿಯೇ ಆಯ್ಕೆಯಾಗಿದೆ ಎಂಬ ಸುದ್ದಿ ಹರಡಿದ್ದು ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದೆ.
ಐದು ವರ್ಷದ ಬಾಲಕನ ಪ್ರತಿರೂಪದಂತೆ ಮೂರ್ತಿ ಸಿದ್ಧಪಡಿಸಲು ಮೂವರು ಶಿಲ್ಪಿಗಳಿಗೆ ಸೂಚಿಸಲಾಗಿತ್ತು. ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್. ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ತಮ್ಮ ಕೌಶಲದಲ್ಲಿ ಅರಳಿದ ಮೂರ್ತಿಗಳನ್ನು ಒಪ್ಪಿಸಿದ್ದಾರೆ. ಇದರಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆ ಆಗಿರುವುದು ಯಾವುದೆಂಬುದು ಕುತೂಹಲ ಮೂಡಿಸಿದೆ.
ಮೂರ್ತಿ ನಿರ್ಮಾಣಕ್ಕಾಗಿ ಎಚ್.ಡಿ. ಕೋಟೆ ತಾಲ್ಲೂಕು ಕೃಷ್ಣಶಿಲೆಯನ್ನು ಅರುಣ್ ಬಳಸಿದ್ದಾರೆ. ಮೂರ್ತಿಗೆ ಅಂತಿಮ ರೂಪ ನೀಡಲು 6 ತಿಂಗಳು ತೆಗೆದುಕೊಂಡಿದ್ದಾರೆ. ಅದು 8 ಅಡಿ ಎತ್ತರ, ಮೂರೂವರೆ ಅಡಿ ಅಗಲ ಇದೆ. ಪಾದದಿಂದ ಹಣೆವರೆಗೆ 51 ಇಂಚು ಎತ್ತರ ಇದ್ದರೆ, ಅಲ್ಲಿಂದಾಚೆಗೆ ಪ್ರಭಾವಳಿಯ ಎತ್ತರ ಸೇರಿದೆ. ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಐದು ವರ್ಷದ ಮಗುವಿನಂತೆ ಕಾಣುವ ಭಗವಾನ್ ರಾಮನ ಮೂರ್ತಿ ಇದಾಗಿದೆ ಎನ್ನುತ್ತಾರೆ ಅವರು.
ಅಯೋಧ್ಯೆಯ ರಾಮಲಲ್ಲಾ ಮೂರ್ತಿ ತಯಾರಿಕೆಗೆ ಪ್ರಸ್ತಾವ ಸಲ್ಲಿಕೆಗೆ ಸಿಕ್ಕಿದ್ದ ಅವಕಾಶವನ್ನು ಅರುಣ್ ಬಳಸಿಕೊಂಡಿದ್ದರು. ಅವರು ನೀಡಿದ್ದ ವಿವರಣೆ ಸಮಿತಿಗೆ ಇಷ್ಟವಾಗಿತ್ತು.
ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ 2000 ಗಣ್ಯರ ಪೈಕಿ ಅರುಣ್ ಒಬ್ಬರಾಗಿದ್ದಾರೆ. ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಆದಿ ಶಂಕರಾಚಾರ್ಯರ ಪ್ರತಿಮೆ ಕೆತ್ತಿದ ನಂತರ ಅವರಿಗೆ ದೊಡ್ಡ ಹೆಸರು ದೊರೆಯಿತು. ಮೈಸೂರಿನ ಬ್ರಹ್ಮಶ್ರೀ ಕಶ್ಯಪ ಶಿಲ್ಪಕಲಾ ನಿಕೇತನದ ಅರುಣ್, 14 ವರ್ಷಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರು ಶಿಲ್ಪ ಕಲಾಕೃತಿಯ 5ನೇ ತಲೆಮಾರಿನವರು. ಅಪ್ಪ ಯೋಗಿರಾಜ್ ಪ್ರೇರಣೆಯಿವರನ್ನು ಈ ವೃತ್ತಿಯತ್ತ ಆಕರ್ಷಿಸಿತು.
ಅಂಬೇಡ್ಕರ್, ರಾಮಕೃಷ್ಣ ಪರಮಹಂಸ, ವಿಶ್ವೇಶ್ವರಯ್ಯ, ಜಯಚಾಮರಾಜ ಒಡೆಯರ್, ಶಿವಕುಮಾರ ಸ್ವಾಮೀಜಿ, ಹನುಮಂತ ಸೇರಿದಂತೆ ಹಲವು ಪ್ರತಿಮೆ ನಿರ್ಮಿಸಿದ್ದಾರೆ.
‘ಶ್ರೀರಾಮ-ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ. ಇದೀಗ ರಾಮನೂರಿನ ಗುಡಿಯನು ಮೈಸೂರಿನ ಬಾಲರಾಮನು ಬೆಳಗುವನು’ ಎಂದು ವಿಜಯೇಂದ್ರ ‘ಎಕ್ಸ್’ ಮಾಡಿದ್ದಾರೆ.
ಅರುಣ್ ಸಿದ್ಧಪಡಿಸಿದ ಮೂರ್ತಿ ಆಯ್ಕೆಯಾಗಿದೆ’ ಎಂಬ ಸುದ್ದಿ ಹರಿದಾಡಿದ್ದು ಇಲ್ಲಿನ ಅವರ ಪೋಷಕರು ಹಾಗೂ ಕುಟುಂಬದವರಲ್ಲಿ ಸಂತಸ ಹೆಚ್ಚಿದೆ.
Comments are closed.