ಕರಾವಳಿ

ಗ್ರಾಮದ ಊರು ಸ್ವಚ್ಚ ಮಾಡುವ ಎಸ್.ಎಲ್.ಆರ್.ಎಂ ಸಿಬ್ಬಂದಿಗಳಿಗೆ ಸನ್ಮಾನಿಸಿ ಗಾಂಧಿಜಯಂತಿ ಆಚರಿಸಿದ ಅಬ್ದುಲ್ ಸಲಾಂ ಚಿತ್ತೂರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: 154ನೇ ಗಾಂಧೀಜಿ ಜಯಂತಿಯನ್ನು ಸಾಮಾಜಿಕ ಕಾರ್ಯಕರ್ತ, ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಹಾಗೂ ಕುಟುಂಬಿಕರು ಎಸ್.ಎಲ್.ಆರ್.ಎಂ ಸಿಬ್ಬಂದಿಗಳಿಗೆ ಅಭಿನಂದಿಸುವ ಮೂಲಕ ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಆಚರಿಸಿದರು.

ಕಾರ್ಯಕ್ರಮದ ಆಯೋಜಕ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ, ವಂಡ್ಸೆ ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿರುವ ಎಸ್.ಎಲ್.ಆರ್.ಎಂ ಘಟಕ ಸುಮಾರು ಐದು ವರ್ಷಗಳಿಂದ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಅಂಗಡಿಗಳಿಂದ ನಿತ್ಯ ಕಸ ಸಂಗ್ರಹಿಸಿಕೊಂಡು ಹೋಗುತ್ತಿರುವುದರಿಂದ ಪ್ರತಿ ಮನೆಯ ಮತ್ತು ಅಂಗಡಿಯ ಪರಿಸರ ಸ್ವಚ್ಛತೆಯಿಂದ ಕೂಡಿದೆ. ಅಲ್ಲದೆ ದಿನಂಪ್ರತಿ ಕಸ ಸಂಗ್ರಹಣೆಗೆ ಬರುವ ವಾಹನ ಚಾಲಕರು ಮತ್ತು ಸಿಬ್ಬಂದಿಗಳು ಸ್ಥಳೀಯ ಮನೆಯವರೊಂದಿಗೆ ಉತ್ತಮ ನಡವಳಿಕೆ, ಸಹನೆ, ತಾಳ್ಮೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಗಾಂಧಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಎಸ್.ಎಲ್.ಆರ್.ಎಂ ಸಿಬ್ಬಂದಿಗಳನ್ನು ಗೌರವಿಸಲಾಗುತ್ತಿದೆ. ಅಂದಿನ ಉಡುಪಿ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ವಂಡ್ಸೆ ಗ್ರಾ‌ಪಂ ಅಧ್ಯಕ್ಷರಾಗಿದ್ದ ಉದಯ್ ಕುಮಾರ್ ಶೆಟ್ಟಿ ಅವರ ಶ್ರಮ ಇಂದು ಸಾರ್ಥಕತೆಯನ್ನು ಕಾಣುತ್ತಿದೆ ಎಂದರು.

ಅಬ್ದುಲ್ ಸಲಾಂ ಚಿತ್ತೂರು ಮತ್ತವರ ಕುಟುಂಬಿಕರು, ಚಿತ್ತೂರಿನ ದಾರುಸ್ಸಲಾಂನಲ್ಲಿ ನೆರೆಕೆರೆಯವರ ಉಪಸ್ಥಿತಿಯಲ್ಲಿ ಎಸ್.ಎಲ್.ಆರ್.ಎಂ ತಂಡದ ಮೇಲ್ವಿಚಾರಕರಾದ ಶ್ವೇತಾ ,ಅಶ್ವಿನಿ, ಚಾಲಕ ಸತೀಶ್, ಸಿಬ್ಬಂದಿಗಳಾದ ಚಂದ್ರ ಮತ್ತು ಗಣೇಶ್ ಇವರನ್ನು ಗೌರವಿಸಿ ಅಭಿನಂದಿಸಿದರು.

ಸ್ಥಳೀಯ ವೈದ್ಯ, ಚಿತ್ತೂರು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಡಾ. ರಾಜೇಶ್ ಬಾಯರಿ ಸಿಬ್ಬಂದಿಗಳನ್ನು ಅಭಿನಂದಿಸಿ ಮಾತನಾಡಿ, ಸ್ಥಳೀಯ ಪರಿಸರ ಸ್ವಚ್ಛತೆಯೊಂದಿಗೆ ದೇಶವನ್ನೇ ಸ್ವಚ್ಛಗೊಳಿಸುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯ. ದೇಶಾದ್ಯಂತ ಕರ್ತವ್ಯ ನಿರ್ವಹಿಸುವ ನಿಮ್ಮಂತ ಲಕ್ಷಾಂತರ ಸ್ವಚ್ಛತಾ ಸಿಬ್ಬಂದಿಗಳಿಗೆ ಈ ಗೌರವ ಸಲ್ಲಲಿದ್ದು ಕಾರ್ಯಕ್ರಮ ಆಯೋಜಿಸಿದ ಅಬ್ದುಲ್ ಸಲಾಂ ಅವರ ಕಾರ್ಯ ಅಭಿನಂದನೀಯ ಎಂದರು.

ಚಿತ್ತೂರು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ. ಪೂಜಾರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿಯ ದಿನ ಜನಿಸಿದ ಉದಯ ಜಿ. ಪೂಜಾರಿ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ‌ರಾದ ಹಸನ್ ಸಾಹೇಬ್, ಪ್ರಗತಿಪರ ಕೃಷಿಕ ಹರವರಿ ಗುಂಡು ಪೂಜಾರಿ, ಉದ್ಯಮಿ ಸಂತೋಷ್ ಶೆಟ್ಟಿ, ಸಂಜೀವ ಭಂಡಾರಿ, ಮಹಾಬಲ ಶೆಟ್ಟಿ, ಕೆ .ಅಬ್ದುಲ್ ರೆಹಮಾನ್, ಮೋನು ಸಾಹೇಬ್, ಹಂಝಾ ಸಾಹೇಬ್, ಮೂಕಾಂಬು ಶೆಡ್ತಿ , ಪದ್ಮಾವತಿ ಶೆಟ್ಟಿ, ಅಮನ್, ನೌಶಾದ್ ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ, ಪದಾಧಿಕಾರಿಗಳಾದ ಕುಸುಮಾಕರ ಪೂಜಾರಿ, ಇ. ಮಹಮ್ಮದ್, ರಿಯಾಝ್, ರಿಕ್ಷಾ ಚಾಲಕರು ಮತ್ತು ನೆರೆಹೊರೆಯವರು ಉಪಸ್ಥಿತರಿದ್ದರು.

Comments are closed.