(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅಭೂತಪೂರ್ವ ವಿಜಯ ಸಾಧಿಸಿದ್ದಾರೆ.

ಶನಿವಾರ ಮತ ಎಣಿಕೆ ಆರಂಭದ ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೂ ಮುನ್ನಡೆಯನ್ನು ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರು 1, 01,102 ಮತ ಹಾಗೂ 1322 ಅಂಚೆ ಮತಗಳನ್ನು ಪಡೆದು ಬರೋಬ್ಬರಿ 40,930 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ವಿರುದ್ದ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು 696 ಅಂಚೆ ಮತ ಹಾಗೂ 60172 ಮತಗಳನ್ನು ಪಡೆದುಕೊಂಡಿದ್ದರು.
ಅಂದು ಚುನಾವಣೆ ಕಾಯಕ..ಇಂದು ಶಾಸಕ..!
ಕಳೆದ ಐದು ಅವಧಿ ಅಂದರೆ ಹೆಚ್ಚುಕಮ್ಮಿ 25 ವರ್ಷ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕುಂದಾಪುರ ಕ್ಷೇತ್ರದ ಶಾಸಕರಾಗಿದ್ದರು. ಇದೆಲ್ಲಾ ಚುನಾವಣೆ ಸಹಿತ ವಿಧಾನಸಭಾಕ್ಷೇತ್ರದಲ್ಲಿ ನಡೆದ ಸ್ಥಳೀಯಾಡಳಿತ, ಸ್ಥಳೀಯ ಸಂಸ್ಥೆ, ಲೋಕಸಭಾ ಚುನಾವಣೆ ಸಹಿತ ಎಲ್ಲಾ ಚುನಾವಣೆ ಕೆಲಸದಲ್ಲಿ ಮುಂಚೂಣಿ ಹೆಸರು ಕೇಳಿಬರುವುದು ಕಿರಣ್ ಕುಮಾರ್ ಕೊಡ್ಗಿ. ಪಕ್ಷದ ಕಾರ್ಯಕ್ರಮ ನಡೆಯಬೇಕೆಂದರೆ ಅದರ ಹಿಂದಿನ ಸಂಪೂರ್ಣ ಮಾಸ್ಟರ್ ಮೈಂಡ್ ಕಿರಣ್ ಕೊಡ್ಗಿಯವರದ್ದೇ ಆಗಿತ್ತು ಎಂಬುದು ಇವರ ಜೊತೆ ಕೆಲಸ ಮಾಡಿದ ಕಾರ್ಯಕರ್ತರ ಅಭಿಪ್ರಾಯ. ಕಾರ್ಯಕರ್ತರ ಮಟ್ಟಿಗೆ ಉತ್ಸಾಹಿ ನಾಯಕನಾಗಿ ಕಾರ್ಯಕರ್ತರ ಜೊತೆಗೆ ಇದ್ದುಕೊಂಡು ಚುನಾವಣೆ ನಡೆಸಿಕೊಟ್ಟು ಅವರು ಗೆದ್ದ ಬಳಿಕ ತಾನಾಯಿತು ಎಂಬಂತಿದ್ದ ಸಂಘಟನಾ ಚತುರ ಕಿರಣ್ ಕೊಡ್ಗಿ ಆಗಿದ್ದರು.
ಗೆಲುವಿಗೆ ಹಾಲಾಡಿ ಬೆಂಬಲ:
ಕಳೆದ ಮೂರು ಅವಧಿಯಿಂದ ಕಾಂಗ್ರೆಸ್ ಮಾತ್ರ ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುತ್ತಲೇ ಬಂದಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಹೊಸ ಮುಖಗಳೇ ಆದರೂ ಈ ಹಿಂದೆ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಘೋಷಣೆ ಮಾಡಿ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಬೆಂಬಲವನ್ನೂ ಸೂಚಿಸಿದ್ದರು. ತಮ್ಮ ಚುನಾವಣೆಗಳಿಗೆ ನಡೆಸಿದ ಮತ ಪ್ರಚಾರಕ್ಕಿಂತ ಹೆಚ್ಚು ಉತ್ಸಾಹಿಯಾಗಿ, ಟೊಂಕ ಕಟ್ಟಿ ನಿಂತು ಅಬ್ಬರದ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಹಕಾರ ನೀಡಿದ್ದರು. ಒಂದು ಮಟ್ಟಿಗೆ ನಿತ್ಯ ಅಲ್ಲಲ್ಲಿ ನಡೆಯುತ್ತಿದ್ದ ಸಭೆಗಳಲ್ಲಿ, ಗುಂಪು ಸಭೆಗಳಲ್ಲಿ (ಒಟ್ಟು 50ಕ್ಕೂ ಅಧಿಕ ಸಭೆ-ಸಮಾರಂಭಗಳಲ್ಲಿ) ಭಾಗವಹಿಸಿ ಮತದಾರರಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಡುವಂತೆ ಮತಯಾಚನೆ ನಡೆಸಿದ್ದರು.
ಕಾರ್ಯಕರ್ತರ ಹುರುಪು…!
ಕಿರಣ್ ಕುಮಾರ್ ಕೊಡ್ಗಿ ಅವರು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾದ ದಿನದಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಚುನಾವಣೆ ಕೆಲಸಕ್ಕೆ ಸ್ವಯಂಪ್ರೇರಿತರಾಗಿ ಮುಂದಾಗಿದ್ದರು. ನಿತ್ಯದ ಎಲ್ಲಾ ಕೆಲಸದಲ್ಲಿ ಭಾಗವಹಿಸಿ ತಮ್ಮ ಅಭ್ಯರ್ಥಿ ಗೆಲುವಿಗೆ ತಮ್ಮದೇ ರೀತಿಯಲ್ಲಿ ಹೋರಾಟ ನೀಡಿದ್ದರು.
ಇತರ ಅಭ್ಯರ್ಥಿಗಳು ಪಡೆದ ಮತ:
ಉಳಿದಂತೆ ಜೆಡಿಎಸ್ ಅಭ್ಯರ್ಥಿ ರಮೇಶ್ ಅವರು 1053 , ಯುಪಿಜೆಪಿ ಅಭ್ಯರ್ಥಿ ಅರುಣ್ ದೀಪಕ್ ಮೆಂಡೋನ್ಸಾ 1257 ಹಾಗೂ ಸ್ವತಂತ್ರ ಅಭ್ಯರ್ಥಿ ಚಂದ್ರಶೇಖರ್ ಜಿ. ಅವರು 728 ಮತಗಳನ್ನು ಪಡೆದುಕೊಂಡಿದ್ದರು. ಒಟ್ಟು ಈ ಕ್ಷೇತ್ರದಲ್ಲಿ 1141 ನೋಟಾ ಮತದಾನವಾಗಿದೆ.
Comments are closed.