ಕುಂದಾಪುರ: ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಪಕ್ಷದ ಹಿರಿಯ ನಾಯಕ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಕೆಪಿಸಿಸಿ ಸದಸ್ಯತ್ವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯ ಕುರಿತು ಮರುಪರಿಶೀಲನೆ ನಡೆಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮನವಿ ಮಾಡಿದೆ.

ಪ್ರತಾಪಚಂದ್ರ ಶೆಟ್ಟಿ ಅವರು ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರು, ಎಐಸಿಸಿ ಸದಸ್ಯರು ಹೀಗೆ ಪಕ್ಷದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮತ್ತು ನಾಯಕರಾಗಿ ಗುರುತಿಸಿಕೊಂಡು 4 ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, 3 ಬಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಹಾಗೂ ಸಭಾಪತಿಯಾಗಿ ಸೇವೆ ಸಲ್ಲಿಸಿರುವುದು ತಮಗೆ ತಿಳಿದ ವಿಷಯವೇ ಆಗಿದೆ. ತಮ್ಮ ರಾಜಕೀಯ ಸಜ್ಜನ, ಸಚ್ಚಾರಿತ್ರ್ಯ, ದಕ್ಷ, ಕಳಂಕರಹಿತ, ಶುದ್ದ ಹಸ್ತದ ರಾಜಕಾರಣಿಯಾಗಿ ತನ್ನ ಸುದೀರ್ಘ 40 ವರ್ಷದ ರಾಜಕೀಯ ಜೀವನದಲ್ಲಿ ಶಕ್ತಿ ಮೀರಿ ಪಕ್ಷಕ್ಕಾಗಿ ದುಡಿದು ತನ್ನ ಕೆಲಸದಿಂದ ಮತ್ತು ವ್ಯಕ್ತಿತ್ವದಿಂದ ಕಾಂಗ್ರೆಸ್ ಪಕ್ಷಕ್ಕೂ ಗೌರವ ಹೆಚ್ಚಾಗುವಂತೆ ಕಾರ್ಯನಿರ್ವಹಿಸಿರುವುದು ಕೂಡಾ ತಿಳಿದ ವಿಚಾರ.
ನೇರನುಡಿ, ಸಾಮಾಜಿಕ ನ್ಯಾಯದ ಬದ್ಧತೆ, ಸಚ್ಚಾರಿತ್ಯದ ಬದುಕಿನಿಂದ ಕೆ ಪ್ರತಾಪಚಂದ್ರ ಶೆಟ್ಟಿಯವರು ಉಡುಪಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಳಷ್ಟು ಜನ ಅನುಯಾಯಿಗಳನ್ನು ಹೊಂದಿದ್ದು, ತನ್ನನ್ನು ನಂಬಿದವರನ್ನು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಎಂದಿಗೂ ಕೈಬಿಡದವರೆಂದು ಜನಜನಿತವಾಗಿರುತ್ತದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಹೋರಾಟಕ್ಕೆ ಯಾವುದೇ ಮುಲಾಜಿಲ್ಲದೇ ಹೋರಾಟ ಮಾಡುವ ವ್ಯಕ್ತಿತ್ವ ಹೊಂದಿರುವುದರಿಂದ ಜಿಲ್ಲೆಯಲ್ಲಿ ಜನಪ್ರಿಯ ಕಾಂಗ್ರೆಸ್ ನಾಯಕರಾಗಿದ್ದಾರೆ.
ಕೆ.ಪ್ರತಾಪಚಂದ್ರಶೆಟ್ಟಿಯವರು ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನಲೆಯಲ್ಲಿ ಮತ್ತು ಪಕ್ಷದಲ್ಲಿ ಬೇರೆಯವರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಅವರು ನೀಡಿರುವ ರಾಜೀನಾಮೆಯು, ಅವರ ನಾಯಕತ್ವದಲ್ಲಿ ಕಳೆದ 30 ವರ್ಷಗಳಿಂದ ಇರುವ ನನಗೆ ವೈಯಕ್ತಿಕವಾಗಿ ನೋವನ್ನುಂಟು ಮಾಡಿದೆ. ಪಕ್ಷದ ಹಿತದೃಷ್ಟಿ ಮತ್ತು ಚುನಾವಣಾ ದೃಷ್ಟಿಯಿಂದ ಅವರ ರಾಜೀನಾಮೆಯು ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಪರಿಣಾಮ ಬೀರಲಿರುವುದು ತಮ್ಮ ಗಮನಕ್ಕೂ ಬಂದಿದೆ ಎಂದು ಭಾವಿಸುತ್ತೇನೆ. ಈ ಎಲ್ಲ ಹಿನ್ನೆಲೆಯಲ್ಲಿ ತಾವು ಕೆ. ಪ್ರತಾಪಚಂದ್ರ ಶೆಟ್ಟಿ ಅವರು ನೀಡಿದ ರಾಜೀನಾಮೆಯ ಪತ್ರದ ಕುರಿತು ಸೂಕ್ತವಾದ ನಿರ್ಧಾರ ಕೈಗೊಳ್ಳಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಪತ್ರದಲ್ಲಿ ವಿವರಿಸಿದ್ದಾರೆ.
Comments are closed.