ಉಡುಪಿ: ಮಾದಕ ವಸ್ತು, ಗಾಂಜಾದೊಂದಿಗೆ ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರನ್ನು ಜ.13 ರಂದು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ವಿ.ಪಿ ನಗರದ 3ನೇ ಮುಖ್ಯ ರಸ್ತೆಯ ಬಳಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಪು ಮಲ್ಲರುವಿನ ಮುಝಾಮಿಲ್ (27), ಉದ್ಯಾವರದ ಮೊಹಮ್ಮದ್ ಅನಾಸ್ ಸಾಹೇಬ್ (25), ಉಡುಪಿ ಶಿವಳ್ಳಿಯ ಮೊಹಮ್ಮದ್ ರಪೀಕ್ (26), ಬಂಟ್ವಾಳ ಮೂಲದ ನಿಹಾಲ್ (18) ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ದಾಳಿ ವೇಳೆ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಖಚಿತ ಮಾಹಿತಿ ಪಡೆದ ಮಣಿಪಾಲ ಠಾಣೆ ಪೊಲೀಸರು, ವಾಸ್ತವ್ಯ ಹೂಡಿದ್ದ ಫ್ಲಾಟ್ ವೊಂದರ ಮೇಲೆ ದಾಳಿ ನಡೆಸಿ ಮಾದಕ ವಸ್ತುಗಳನ್ನು ಹೊಂದಿ ದರೋಡೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಹೊಂಚು ಹಾಕುತ್ತಿದ್ದ ವ್ಯಕ್ತಿಗಳನ್ನು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಶದಲ್ಲಿದ್ದ ಒಟ್ಟು 25,000 ರೂ. ಮೌಲ್ಯದ 6 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು, 110 ಗ್ರಾಂ ಗಾಂಜಾ, ದರೋಡೆಗೆ ಹೊಂದಿದ್ದ ಮಚ್ಚು ಸಹಿತ ಇತರೆ ಮಾರಕಾಯುಧಗಳನ್ನು ಹಾಗೂ 5 ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಆರೋಪಿಗಳ ಬಂಧನದಿಂದ ಸಂಭಾವ್ಯ ಘಟನೆಯನ್ನು ತಪ್ಪಿಸುವಲ್ಲಿ ಮಣಿಪಾಲ ಪೊಲೀಸರ ತಂಡ ಯಶಸ್ವಿಯಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ., ಉಡುಪಿ ಡಿವೈಎಸ್ಪಿ ದಿನಕರ ಕೆ.ಪಿ, ಮಣಿಪಾಲ ಠಾಣೆಯ ಇನ್ಸ್‌ಪೆಕ್ಟರ್ ದೇವರಾಜ ಟಿ.ವಿ ಪಿಎಸ್ಐ ಅಬ್ದುಲ್ ಖಾದರ್, ಡಿ.ವಿ.ಬಿ.ಡಿ.ಸಿ ಕಚೇರಿಯ ಸಿಬ್ಬಂದಿ ವಸಂತ ಕುಮಾರ್ ಮತ್ತು ಮಣಿಪಾಲ ಪಿ.ಹೆಚ್.ಸಿ. ಯ ಸಿಬ್ಬಂದಿ ಪರಶುರಾಮ್ ಅಲ್ಲದೆ ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ನಾಗೇಶ್ ನಾಯಕ್, ಹೆಡ್ ಕಾನ್ಸ್‌ಟೇಬಲ್ ಗಳಾದ ಸುಕುಮಾರ್ ಶೆಟ್ಟಿ, ಇಮ್ರಾನ್, ಪ್ರಸನ್ನ, ಸಿಬ್ಬಂದಿಗಳಾದ ಸಲ್ಮಾನ್ ಖಾನ್, ಅರುಣ್ ಕುಮಾರ್, ಮಹಿಳಾ ಸಿಬ್ಬಂದಿ ಶುಭಾ, ಚೆನ್ನೇಶ್, ಆನಂದಯ್ಯ, ಚಾಲಕರಾದ ಸುದೀಪ್, ಮಲ್ಲನಗೌಡ ಮೊದಲಾದವರಿದ್ದ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.
Comments are closed.