ಉಡುಪಿ (ವಿಶೇಷ ವರದಿ): ನಮ್ಮ ಭವ್ಯ ಭಾರತದ ಉದ್ದಗಲಗಳಲ್ಲಿ ಅನೇಕ ಸಾಧು ಸಂತರು ದಾರ್ಶನಿಕರು ಅವತರಿಸಿದ್ದಾರೆ. ಆಧ್ಯಾತ್ಮಿಕ ಸಾಧನೆಯಲ್ಲಿ ಉನ್ನತಿಯನ್ನು ಪಡೆದು ಮನುಕುಲಕ್ಕೆ ಮಾರ್ಗದರ್ಶನ ನೀಡಿ ಈ ಭೂಮಿಯನ್ನು ಪಾವನಗೊಳಿಸಿದ್ದಾರೆ. ಇಂತಹ ಅನೇಕ ಮಹಾತ್ಮರಲ್ಲಿ ಮುಂಬೈ ಗಣೇಶಪುರಿಯ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಜಿಯವರು ಪ್ರಮುಖರು.

ತುಳುನಾಡಿನ ಧರ್ಮ ಸಂಸ್ಕೃತಿಯ ಪುಣ್ಯಭೂಮಿಯ ಉಡುಪಿಯಲ್ಲಿ 1961 ರಲ್ಲಿ ಸಾದ್ವಿ ಸೀತಮ್ಮನವರು ಸ್ಥಾಪಿಸಿದ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಪುನರ್ ನಿರ್ಮಾಣವಾಗಿ 2023ಜನವರಿ 15 ಮತ್ತು 16ನೇ ತಾರೀಕಿನಂದು ಪುನರ್ ಪ್ರತಿಷ್ಠೆಯಾಗಿ ಲೋಕಾರ್ಪಣೆ ಗೊಳ್ಳಲಿದೆ.
ಭಕ್ತಜನಕೋಟಿಗೆ ತನ್ನ ಅಭಯಹಸ್ತವನ್ನು ನೀಡಿ ಪಾವನರಾಗಿಸಿದ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಗಳ ಜೀವನ ವೃತ್ತಾಂತದ ಮೇಲೆ ಬೆಳಕು ಚೆಲ್ಲುವ ವಿಶೇಷ ಲೀಖನ…
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಗಳ ಹೆಜ್ಜೆ ಗುರುತುಗಳು.
ಹದಿನೆಂಟನೆ ಶತಮಾನ 1880ರ ದಶಕದಲ್ಲಿ ಕೇರಳದ ಕೋಜಿಕೋಡ್ ಜಿಲ್ಲೆಯ ತುನೇರಿ ಗ್ರಾಮದಲ್ಲಿ ಚಾತು ನಾಯರ್ ಬೇಸಾಯ ಮಾಡಿಕೊಂಡು ಜೀವಿಸುತ್ತಿದ್ದ. ಉನ್ನಿ ಅಮ್ಮ ಎಂಬ ಕನ್ಯೆಯೊಂದಿಗೆ ವಿವಾಹವಾಗಿ ದಂಪತಿಗಳಿಗೆ ಎಂಟು ಮಕ್ಕಳಿದ್ದರು. ಅನಾರೋಗ್ಯದಿಂದ ಮೂರು ಮಕ್ಕಳು ಅಸುನೀಗಿದ್ದವು.
ಅತ್ಯಂತ ಬಡತನದಲ್ಲಿ ಜೀವಿಸುತ್ತಿದ್ದ ಚಾತುನಾಯರ್ ಕುಟುಂಬಕ್ಕೆ ಊರಿನ ಪ್ರಸಿದ್ದ ಬ್ರಾಹ್ಮಣ ವಕೀಲರಾಗಿದ್ದ ಟಿ. ಆರ್. ಈಶ್ವರ್ ಅಯ್ಯರ್ ಒಂದು ಗುಡಿಸಲು ನೀಡಿ ಆಶ್ರಯದಾತರಾಗಿದ್ದರು. ವಕೀಲರ ಮನೆಯ ಕೆಲಸ ಉನ್ನಿ ಅಮ್ಮ ಹಾಗೂ ತೋಟದ ಕೆಲಸ ಚಾತು ನಾಯರ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ವಕೀಲ ಈಶ್ವರ ಅಯ್ಯರ್ ಬೆಳಗಿನ ಜಾವ 3.30ಕ್ಕೆ ಎದ್ದು ನಿತ್ಯಕರ್ಮ ಮುಗಿಸಿ, ಪ್ರಾರ್ಥನೆ, ಸೂರ್ಯ ಉಪಾಸನೆ, ಅಧ್ಯಾತ್ಮ, ಧರ್ಮೋಪಾಸನೆ ಹಾಗೂ ಮನೆಯ ಪಕ್ಕದಲ್ಲಿದ್ದ ಶ್ರೀ ವಿಷ್ಣು, ಶಂಕರ, ಸ್ವಾಮಿ ಅಯ್ಯಪ್ಪ ಮಂದಿರಗಳಿಗೆ ಭೇಟಿ ನೀಡುತ್ತಿದ್ದರು. ಆ ಮಂದಿರಗಳಲ್ಲಿ ಚಾತು ನಾಯರ್ ದಂಪತಿಗಳು ಸಹ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದರು. ದೇವರಿಗೆ ನೈವೇದ್ಯ ಆದ ನಂತರ ಅನ್ನ ಪ್ರಸಾದ ಸಿಗುತ್ತಿತ್ತು. ಮನೆಯಲ್ಲಿ ಮಕ್ಕಳೊಂದಿಗೆ ಹಸಿವು ನೀಗಿಸಿಕೊಳ್ಳುತ್ತಿದ್ದರು.
ಒಂದು ದಿನ ವಿಪರಿತ ಮಳೆ, ಮಿಂಚುಗಳು ಬರುತ್ತಿದ್ದು, ಗುಡಿಸಿಲಿನಲ್ಲಿ ಮಲಗಿದ್ದ ಉನ್ನಿ ಅಮ್ಮನಿಗೆ ಕನಸಿನಲ್ಲಿ ಸ್ನಾನ ಮಾಡಿ ದೇವರನ್ನು ಬೇಡಿಕೊಳ್ಳುವಾಗ, ಶ್ರೀ ವಿಷ್ಣು ಮತ್ತು ಶಂಕರ ದೇವರು ಪ್ರತ್ಯಕ್ಷವಾಗಿ ದರ್ಶನ ನೀಡಿರುವ ದೃಶ್ಯವನ್ನು ಕಂಡ ಉನ್ನಿ ಅಮ್ಮ ತನ್ನ ಗಂಡನಿಗೆ ತಿಳಿಸಿದಳು.
ಉನ್ನಿ ಅಮ್ಮ ನಂತರ ಎದ್ದು ತೆಂಗಿನ ಗರಿಗಳ ಸೂಡಿಗೆ ಬೆಂಕಿ ಹಚ್ಚಿಕೊಂಡು ಬೆಳಗಿನ ಜಾವ ಕತ್ತಲಿನಲ್ಲಿ ಮಂದಿರದ ಕಡೆಗೆ ಹೆಜ್ಜೆ ಹಾಕಿದಳು. ದಾರಿಯ ಬದಿಯಲ್ಲಿ ಗಂಡು ಕೂಸು ಮಲಗಿದ್ದು, ಸರ್ಪವು ಹೆಡೆ ಬಿಚ್ಚಿ ಮಗುವಿನ ಪಕ್ಕದಲ್ಲಿತ್ತು. ಈ ದೃಶ ಕಂಡು ಉನ್ನಿ ಅಮ್ಮ ಬೆಚ್ಚಿ ಬಿದ್ದಳು, ನಂತರ ಸರ್ಪವು ಮಗುವಿಗೆ ಒಂದು ಸುತ್ತುಹಾಕಿ ಹೊರಟು ಮಾಯವಾಯಿತು.
ಮನೆಯಲ್ಲಿ ಹೆಂಡತಿಯನ್ನು ಕಾಣದ ಚಾತು ನಾಯರ್ ಹುಡುಕಿಕೊಂಡು ಮಂದಿರದ ಕಡೆಗೆ ಹೊರಟು ಬರುವಾಗ ದಾರಿಯಲ್ಲಿ ಹೆಂಡತಿಯ ಕೈಯಲ್ಲಿ ಮುಗ್ದ ಸೌಂದರ್ಯ ದಿವ್ಯ ತೇಜಸ್ಸಿನ ಗಂಡು ಮಗುವನ್ನು ಕಂಡು ವಿಚಾರಿಸಿದಾಗ ಅಲ್ಲಿನ ವಿಚಾರ ತಿಳಿದು ಹೆಂಡತಿಯ ಇಚ್ಚೆಯಂತೆ ಸತಿಪತಿಗಳು ಇರ್ವರು ಮಗುವನ್ನು ಮನೆಗೆ ತಂದರು.
ಮಗುವಿಗೆ ಒಂದು ವರ್ಷ ತುಂಬಿದಾಗ ವಕೀಲ ಅಯ್ಯರ್ ರವರ ನಿರ್ದೇಶನದಂತೆ ಅನಂತ ನಾರಾಯಣ ಶಾಸ್ತಿçಗಳು ಕೂಸಿಗೆ ರಾಮನ್ ಎಂದು ನಾಮಕರಣ ಮಾಡಿದರು. ಮಗುವಿಗೆ ಒಂದುವರೆ ವರ್ಷ ತುಂಬುವ ಸಂದರ್ಭದಲ್ಲಿ ಅನಾರೋಗ್ಯದಿಂದ ಚಾತು ನಾಯರ್ ಅಸು ನೀಗಿದ, ಇತ್ತ ಗಂಡನನ್ನು ಕಳೆದುಕೊಂಡ ಉನ್ನಿ ಅಮ್ಮನಿಗೆ ತನ್ನ ಐದು ಮಕ್ಕಳೊಂದಿಗೆ ಈ ಸಾಕು ಮಗುವಿನ ಜವಬ್ಧಾರಿ ಹೆಚ್ಚಾಗಿ ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದಳು.
ರಾಮನ್ ಗೆ ಮೂರುವರ್ಷ ತುಂಬಿದಾಗ ಈಶ್ವರ ಅಯ್ಯರ್ ಮನೆಗೆ ನಂಬೂದಿರಿಪಾಡ್ ಎಂಬ ಜ್ಯೋತಿಷಿ ಬಂದು ಮನೆಯ ತುಂಬಾ ಒಡಾಡಿಕೊಂಡಿದ್ದ ರಾಮನ್ ಜ್ಯೋತಿಷಿಯ ಗಮನ ಸೆಳೆದನು. ಪುಟ್ಟ ಬಾಲಕನ ಮುಖದ ವರ್ಚಸನ್ನು ಕಂಡ ಜ್ಯೋತಿಷಿ, ಈ ಮಗು ಮುಂದೊಂದು ದಿನ ಪ್ರಪಂಚದ ಜ್ಯೋತಿಯಾಗಿ, ಭವಸಾಗರದಲ್ಲಿ ತೊಳಲುತಿರುವ ಅಸಂಖ್ಯ ಜನಕೋಟಿಯನ್ನು ಉದ್ದರಿಸುವನು ಎಂದು ಭವಿಷ್ಯ ನುಡಿದರು.
ರಾಮನ್ ಮೂರ್ವರೆ ವರ್ಷದವನಿದ್ದಾಗ ಆತನಿಗೆ ಬಾಲಗ್ರಹ ದೋಷ ಕಾಡಿತ್ತು. ಎಲ್ಲಾ ರೀತಿಯ ಔಷದೋಪಚಾರ ಮಾಡಿದರೂ ಗುಣಮುಖವಾಗದೆ ಮಗುವಿನ ದೇಹ ಅಸ್ಥಿಪಂಜರವಾಯಿತು. ಮುಖ ಕಳೆಗುಂದಿತು. ರಾತ್ರಿ ಪೂರ್ತಿ ಅರಚುತಿದ್ದ ಮಗುವಿನ ಮೇಲೆ ಕೋಪಗೊಂಡು ಪಕ್ಕದ ಮನೆಯಯಾತ ನಶೆಯ ಅಮಲಿನಲ್ಲಿ ಇವರ ಮನೆಗೆ ಬಂದು ಸಿಟ್ಟಿನಿಂದ ಈ ಅನಾರೋಗ್ಯ ಮಗುವನ್ನು ನದಿಗೆ ಎಸೆದು ಬಿಡುವಂತೆ ಗದರಿಸಿದ್ದ. ದಿಕ್ಕು ತೋಚದಂತಾದಿದ್ದ ಉನ್ನಿ ಅಮ್ಮ ಬೆಳಕು ಹರಿಯುತ್ತಲೆ, ಮಗುವನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ತನ್ನ ಮಗುವನ್ನು ಪೂರ್ಣ ಗುಣಮುಖವಾಗುವಂತೆ ಪರಿ ಪರಿಯಾಗಿ ಬೇಡಿಕೊಂಡಳು. ಇವಳ ಪ್ರಾರ್ಥನೆ ದೇವರಿಗೆ ಸಹ ಕೇಳಿರಬಹುದು.
ಒಂದು ದಿನ ವಾಡಿಕೆಯಂತೆ ದೇವಸ್ಥಾನಕ್ಕೆ ಹೋಗುವಾಗ ದಾರಿಯಲ್ಲಿ ಕಳ್ಳು ತೆಗೆವುವಾತ, ಉನ್ನಿ ಅಮ್ಮ ಮತ್ತು ಮಗುವನ್ನು ಕಂಡು ಇವರನ್ನು ತಡೆದು ನಿಲ್ಲಿಸಿದನು. ಆತನ ಬಲಗೈಯಲ್ಲಿಒಂದು ಕಾಗೆಯಿತ್ತು. ಸೊಂಟದ ಬದಿಯಲ್ಲಿ ಕಳ್ಳು ತುಂಬಿದ ಬಿದಿರಿನ ಬುಡ್ಡೆ, ಸೊಂಟದಲ್ಲಿ ಕಟ್ಟಿದ ಹಗ್ಗದಲ್ಲಿ ಕತ್ತಿ ನೇತಾಡುತಿತ್ತು. ತನ್ನ ಕೈಯಲ್ಲಿದ್ದ ಕಾಗೆಯನ್ನು ಉನ್ನಿ ಅಮ್ಮನಿಗೆ ನೀಡಿ, ಈ ಕಾಗೆಯನ್ನು ಕತ್ತರಿಸಿ ಅದರ ರಕ್ತವನ್ನು ಮೈಗೆಲ್ಲಾ ಹಚ್ಚಿ ಹಾಗೂ ಕಾಗೆಯ ಮಾಂಸದ ತುಂಡನ್ನು ತುಪ್ಪದಲ್ಲಿ ಹುರಿದು ಬೆಳಿಗ್ಗೆ ತಿನಿಸಲು ಹೇಳಿದ ತಕ್ಷಣ ಎದುರು ಇದ್ದ ವ್ಯಕ್ತಿ ಆದೃಶ್ಯರಾದನು.
ಕ್ರಮೇಣ ರಾಮನ್ ಆನಾರೋಗ್ಯದಿಂದ ಗುಣ ಮುಕ್ತನಾದ ನಂತರ ಶರೀರ ಮಾತ್ರ ಕಾಡಿಗೆಯಂತೆ ಕಪ್ಪಾಯಿತು. ರೋಗದಿಂದ ಮುಕ್ತನಾಗಿ ರಾಮನ್ ದಷ್ಟಪುಷ್ಟನಾದ ಬಾಲಕ ಆರು ವರ್ಷದವನಾಗಿದ್ದಾಗ ಸಾಕು ತಾಯಿ ಉನ್ನಿ ಅಮ್ಮ ಇಹಲೋಕ ತ್ಯಜಿಸಿದರು.
ಅಲೌಕಿಕ ದಿವ್ಯತೆಯ ಮುಖ ತೇಜಸ್ಸನ್ನು ಹೊಂದಿದ್ದ ಈ ಬಾಲಕನನ್ನು ಆಶ್ರಯದಾತರಾಗಿದ್ದ ಈಶ್ವರ ಅಯ್ಯರ್ ರವರಿಗೆ ಕಂಡರೆ ಅಪಾರ ಪ್ರೀತಿ, ಸದಾ ಕಣ್ಣ ಮುಂದೆ ಓಡಾಡಿಕೊಂಡು ಇರಬೇಕೆಂದು ಬಯಸುತ್ತಿದ್ದರು. ಒಂದು ದಿನ ದುರಾಸೆಯ ಹಾವಾಡಿಗರು ರಾತ್ರಿ ಬಂದು ಮನೆಯೊಳಗೆ ಹಾವುಗಳನ್ನು ಬಿಟ್ಟು ಹೋಗಿದ್ದರು. ಇದನ್ನು ಕಂಡ ರಾಮನ್ ಎಲ್ಲಾ ಹಾವುಗಳನ್ನು ಹಿಡಿದು ಬುಟ್ಟಿಯೊಳಗೆ ಹಾಕಿಕೊಂಡು ಕಾಡಿನಲ್ಲಿ ಬಿಟ್ಟು ಬಂದಿದ್ದ.
ಮಾರನೆಯ ದಿನ ಹಾವಾಡಿಗರು ಮನೆಗೆ ಬಂದು ಮನೆಯಲ್ಲಿ ಹಾವು ಇದೆ ಎಂದು ಹೇಳಿ ಪುಂಗಿಯನ್ನು ಊದಿದಾಗ ಯಾವ ಹಾವು ಕೂಡ ಬರಲಿಲ್ಲ. ಹಣ ಪೀಕಲು ಮಾಡಿದ ಕುತಂತ್ರ ಪಲಿಸದೆ ಪೆಚ್ಚು ಮೋರೆ ಹಾಕಿಕೊಂಡು ಹಿಂತಿರುಗಿದರು. ರಾಮನ್ ದೂರದಿಂದಲೆ ನೋಡಿ ನಗುತ್ತಿದ್ದನು.ರಾಮನ್ ಗೆ ಈಶ್ವರ್ ಅಯ್ಯರ್ ಮನೆಯಲ್ಲಿಯೇ ಮಲಯಾಳಂ, ಸಂಸ್ಕೃತ, ಇಂಗ್ಲೀಷ್ ಭಾಷೆಯನ್ನು ಕಲಿಸಿದರು. ಕುಶಾಗ್ರಮತಿ ಬುದ್ದಿಯ ರಾಮ ಶೀಘ್ರವಾಗಿ ಕಲಿತರು.
ಈಶ್ವರ ಅಯ್ಯರ್ ತಮ್ಮ ತಂದೆಯ ಕ್ರಿಯೆಗಳನ್ನು ಮಾಡಲು ಕಾಶಿಗೆ ಹೋಗುವಾಗ ಜೊತೆಯಲ್ಲಿ ರಾಮನ್ ನ್ನು ಕರೆದುಕೊಂಡು ಹೋಗಿದ್ದರು. ಪೂರ್ವಜರಿಗೆ ಮಾಡಬೇಕಾಗಿದ್ದ ಪಿಂಡಾರ್ಪಣೆ ಕ್ರಿಯೆ ಎಲ್ಲ ಮುಗಿಸಿದರು. ನಂತರ ರಾಮನ್ ಹರಿಶ್ಚಂದ್ರ ಘಾಟಿನಲ್ಲಿ ಧ್ಯಾನವಸ್ಥೆಯಲ್ಲಿ ಕುಳಿತು ಕೊಂಡ ದೃಶ್ಯವನ್ನು ಈಶ್ವರ್ ಅಯ್ಯರ್ ನೋಡಿದರು. ಕೆಲವು ದಿನಗಳು ಕಳೆದು ಊರಿಗೆ ಹಿಂತಿರುಗುವ ಸಂದರ್ಭದಲ್ಲಿ ರಾಮನ್ ಗೆ ಹಿಮಾಲಯಕ್ಕೆ ಹೋಗುವ ತನ್ನ ಇಚ್ಚೆಯನ್ನು ಈಶ್ವರ್ ಅಯ್ಯರ್ ಬಳಿ ಕೇಳಿದಾಗ ಒಲ್ಲದ ಮನಸ್ಸಿನಲ್ಲಿ ಹೋಗಲು ಅನುಮತಿಸಿದರು.
ಈಶ್ವರ ಅಯ್ಯರ್ ಮಗಳ ಮದುವೆಯ ನಿಶ್ಚಯವಾಗಿತ್ತು. ಮದುಯೆಯಲ್ಲಿ ರಾಮನ್ ಸಹ ಇರಬೇಕೆಂದು ಮನಸ್ಸು ಹಾತೊರೆಯುತಿತ್ತು. ಕೊನೆಗಳಿಗೆಯಲ್ಲಿ ರಾಮನ್ ಮದುವೆಗೆ ಬಂದು ತಲುಪಿದ್ದು ಈಶ್ವರ್ ಅಯ್ಯರ್ ತೃಪ್ತರಾದರು.
ಈಶ್ವರ್ ಅಯ್ಯರ್ ಧ್ಯಾನಕ್ಕೆ ಕುಳಿತ ಸಮಯದಲ್ಲಿ ರಾಮನ್ ನ್ನು ಬಳಿಗೆ ಕರೆದು, ನನಗೆ ಸೂರ್ಯ ನಾರಾಯಣ ರೂಪದಲ್ಲಿ ವೀಕ್ಷಿಸುವ ಇಚ್ಚೆ ಇದೆ ಎಂದು ಕೇಳಿಕೊಂಡರು. ಸ್ವಲ್ಪ ಸಮಯದಲ್ಲೇ ಅವರ ಇಚ್ಚೆ ಪೂರ್ತಿಗೊಂಡಿತು. ಪರಮಾನಂದ ಅನುಭೂತಿಯನ್ನು ಪಡೆದ ಈಶ್ವರ್ ಅಯ್ಯರ್ ರಾಮನ್ ನ್ನು ಕರೆದು ನೀನು ನನಗೆ ಅಪಾರವಾದ ಆನಂದವನ್ನು ಕೊಟ್ಟಿರುವೆ, ಸಚ್ಚಿದಾನಂದವನ್ನು ಕೊಟ್ಟಿರುವೆ, ನೀನು ನನ್ನ ನಿತ್ಯಾನಂದ, ಎಲ್ಲರಿಗೂ ನಿತ್ಯಾನಂದವಾಗಿರು ಎಂದು ಹೇಳಿ ಕೊನೆಯುಸಿರು ಎಳೆದರು. ಅಂದಿನಿಂದ ರಾಮನ್ ನಿತ್ಯಾನಂದರಾದರು.
ನಿತ್ಯಾನಂದರು ತನ್ನನ್ನು ಸಾಕಿ ಸಲುವಿದ ಈಶ್ವರ್ ಅಯ್ಯರ್ ರವರ ಚಿತಾ ಭಸ್ಮ ಅಸ್ಥಿಯನ್ನು ಕಾಶಿಗೆ ತೆಗೆದು ಕೊಂಡು ಹೋಗಿ ಮಣಿಕರ್ಣಿಕ ಘಾಟಿನಲ್ಲಿ ಗಂಗೆಯ ಮಡಿಲಿಗೆ ಅರ್ಪಿಸಿ ಕ್ರಿಯೆಗಳನ್ನು ಪೂರ್ತಿಗೊಳಿಸಿದರು. ನಂತರ ಕಾಶಿಯಲ್ಲಿ ನಲುವತ್ತೊಂದುದಿನ ಧ್ಯಾನದಲ್ಲಿ ಕಳೆದರು. ಧ್ಯಾನ ಯೋಗ ಶಕ್ತಿಯಿಂದ ಮೈಮನ ಶರೀರ ಹಾಗೂ ಮುಖಚರ್ಯೆಯಲ್ಲಿ ಅಸಾಧರಣ ಶಕ್ತಿ ಗೋಚರಿಸುತ್ತಿತ್ತು. ಕಾಲಭೈರವ ದೇವಸ್ಥಾನದಲ್ಲಿ ಕಾಷಾಯ ವಸ್ತçಗಳನ್ನು ಧರಿಸುತ್ತಿದ್ದರು. ಹಾಲು ಹಣ್ಣು ಫಲವನ್ನು ಮಾತ್ರ ಸ್ವೀಕರಿಸುತ್ತಿದ್ದರು.
ಒಮ್ಮೆ ಪಳನಿ ಸುಬ್ರಹ್ಮಣ್ಯ ದೇವಾಸ್ಥಾನದ ಮಧ್ಯಾಹ್ನದ ಪೂಜೆ ಮುಗಿಸಿ ಬಾಗಿಲು ಹಾಕಿ ತೆರಳುವ ಸಮಯದಲ್ಲಿ ನಿತ್ಯಾನಂದರು ಅರ್ಚಕರನ್ನು ದೇವರ ದರ್ಶನಕ್ಕೆ ಅನುವು ಮಾಡಿಕೊಡಲು ಕೇಳಿಕೊಂಡರು. ಅರ್ಚಕರು ನಿರಾಕರಿಸಿ ನಡೆದೇ ಬಿಟ್ಟರು. ಕೆಲವೇ ಕ್ಷಣದಲ್ಲಿ ದೇವಸ್ಥಾನದ ಗಂಟೆಯ ಶಬ್ಧ, ನಗಾರಿಯ ಶಭ್ದ, ಶಂಖನಾದ ಕೇಳಿಬರುತಿತ್ತು. ದೂರ ಹೋಗಿದ್ದ ಅರ್ಚಕರು ಒಡೋಡಿ ಹಿಂತಿರುಗಿ ಬಂದು ನೋಡಿದಾಗ ಬಾಗಿಲು ಮುಚ್ಚಿದೆ. ಎದುರು ಬದಿಯಲ್ಲಿ ನಿತ್ಯಾನಂದರು ಒಂಟಿಕಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಆನಂದ ಪರವಶರಾಗಿದ್ದರು.
ನಿತ್ಯಾನಂದರ ಮಹಿಮೆಯನ್ನು ಸುತ್ತಮುತ್ತಲಿನ ಜನಸ್ತೋಮ ನೋಡಿ ಮೂಖವಿಸ್ಮಿತರಾಗಿದ್ದರು. ಪವಾಡ ಪುರುಷರಂತೆ ಕಂಡು ಬರುತ್ತಿದ್ದ ನಿತ್ಯಾನಂದರ ಮಹಿಮೆಗೆ ಕಂಡು ಅವರ ಆಶೀರ್ವಾದಗಳನ್ನು ಪಡೆಯಲು ಅಪಾರ ಸಂಖೆಯಲ್ಲಿ ಬಂದು ಅವರ ಅನುಯಾಯಿಗಳಾದರು. ನಿತ್ಯಾನಂದರು ಒಂದೆ ಊರಿನಲ್ಲಿ ಶಾಶ್ವತವಾಗಿ ನೆಲೆಯಾಗಿ ಇರುತಿರಲಿಲ್ಲ.
ದಕ್ಷಿಣ ಭಾರತದಾದ್ಯಂತ ಪ್ರವಾಸ ಮಾಡುತ್ತಾ ಕನ್ಯಾಕುಮಾರಿ, ತಿರುವಂಕೂರು, ಕಣ್ಣನೂರು, ಮಂಜೇಶ್ವರ, ಕುಂಬಳೆ ಊರುಗಳಲ್ಲಿ ಹಲವು ದಿನಗಳು ತಂಗಿದ್ದು ಕಷ್ಟ ಕಾರ್ಪಣ್ಯಗಳಿಂದ ಬಳಲುತ್ತಿರುವವರನ್ನು ಸಂತೈಸಿ, ತಮ್ಮ ಸ್ಪರ್ಶದಿಂದ ಗುಣಮುಖನಾಗಿಸುವ ಅದ್ಭುತ ಶಕ್ತಿಯನ್ನು ಪಡೆದಿದ್ದ ನಿತ್ಯಾನಂದರನ್ನು ಪ್ರತ್ಯಕ್ಷವಾಗಿ ಕಂಡ ಜನ ಸಮೂಹ ಅತ್ಯಂತ ಭಕ್ತಿಭಾವದಿಂದ ನೋಡ ತೊಡಗಿದರು.
ತಮ್ಮ ಪಯಣವನ್ನು ಮುಂದುವರಿಸುತ್ತಾ ಕಡತೀರದ ಮಂಗಳೂರು, ಉಡುಪಿಯ ಕಡೆಗೆ ಬಂದರು ಕೃಷ್ಣಾಪುರ ದೇವಸ್ಥಾನ, ಅನಂತೇಶ್ವರ ದೇವಸ್ಥಾನದ ಛಾವಡಿಯ ಮೇಲೆ ಕೆಲವು ಭಿಕ್ಷುಕರು ಚಳಿಯಲ್ಲಿ ಮಲಗಿದ್ದರು. ತಾವು ಧರಿಸಿದ್ದ ಎಲ್ಲಾ ಉಡುಪಿಗಳನ್ನು ತೆಗೆದು ಮಲಗಿದವಿಗೆ ಹೊದಿಸಿ ತಾವು ಬರೇ ಲಂಗೋಟಿಯಲ್ಲಿ ಮಲಗಿದ್ದರು. ಅಂದಿನ ವರ್ಷದಲ್ಲಿ ಉಡುಪಿಯ ಆಸ್ಪತ್ರೆಯಲ್ಲಿ ಡಾ. ಕೊರಂಬೈಲ ಎಂಬುವವರು ಅಧಿಕಾರಿಯಾಗಿದ್ದರು. ನಿತ್ಯಾನಂದರು ಛಾವಡಿ ಕಟ್ಟೆಯ ಮೇಲೆ ಮಲಗಿದ್ದ ವಿಚಾರ ತಿಳಿದು ತಾವೇ ಸ್ವತಹ ಬಂದು ಈ ಮಹಾ ಯೋಗಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದರು. ಕೆಲವೊಮ್ಮೆ ಉಡುಪಿಯ ರಥಬೀದಿಯಲ್ಲಿ ಧ್ಯಾನದಲ್ಲಿ ಕುಳಿತಿರುವಾಗ ಇವರ ಬಳಿ ಹಲವರು ಕಾಣಿಕೆಯನ್ನು ಹಾಕಿ ಹೋಗುತ್ತಿದರು. ಎಚ್ಚರವಾದ ನಂತರ ಎಲ್ಲ ಕಾಣಿಕೆಗಳನ್ನು ಸುತ್ತ ಮುತ್ತಲಿನ ಭಿಕ್ಷುಕರಿಗೆ ಹಂಚಿ ಹೋಗುತ್ತಿದರು.
ನಿತ್ಯಾನಂದರ ಮಹಿಮೆಯನ್ನು ತಿಳಿದು ಅಪಾರ ಸಂಖ್ಯೆಯಲ್ಲಿ ಜನಸ್ಥೋಮ ಇವರ ದರ್ಶನಕ್ಕಾಗಿ ಹಾತೊರೆಯುತಿದ್ದರು. ಇವರ ಅಧ್ಯಾತ್ಮಿಕ ಶಕ್ತಿ, ಯೋಗ ಶಕ್ತಿ, ಕಷ್ಟಗಳನ್ನು ತೊಡೆದುಹಾಕುವ ಶಕ್ತಿ ಉಡುಪಿ ಜಿಲ್ಲಾ ಕಲೆಕ್ಟರಿಗೆ ಸಹ ತಲುಪಿತ್ತು. ಸ್ವತಹ ಅವರೇ ನಿತ್ಯಾನಂದರ ಬಳಿ ಬಂದು ನನಗೂ ಸಹ ಬಡವರ ಸೇವೆ ಮಾಡುವ ಅವಕಾಶ ಕಲ್ಪಿಸುವ ಬಗ್ಗೆ ಕೇಳಿಕೊಂಡರು. ನಿತ್ಯಾನಂದರ ಸೂಚನೆಯಂತೆ ಅನ್ನದಾನ ಯಜ್ಞ ಬಹಳಷ್ಟು ಸಮಯ ನಡೆಯಿತು.
ಉಡುಪಿಯಲ್ಲಿ ಸಾಧ್ವಿ ಸೀತಾಬಾಯಿ ನಿತ್ಯಾನಂದ ಸ್ವಾಮಿಯವರ ಪರಮ ಭಕ್ತೆಯಾಗಿದ್ದರು. 1961 ರಲ್ಲಿ ಉಡುಪಿಯ ಹೃದಯಭಾಗದಲ್ಲಿ ತಮ್ಮ ಪರಮ ಗುರು ನಿತ್ಯಾನಂದ ಸ್ವಾಮಿಗೆ ಮಂದಿರ ಮಠವನ್ನು ಸ್ಥಾಪಿಸಿದ್ದರು. 2023ರಲ್ಲಿ ಈ ಮಂದಿರವನ್ನು ಪುನರ್ ನಿರ್ಮಾಣ ಮಾಡಿ ನವಿಕೃತ ಮಂದಿರದ ಜನವರಿ 15 ಮತ್ತು 16ನೇ ತಾರೀಕಿನಂದು ಉದ್ಘಾಟನೆಗೊಳ್ಳಲಿದೆ.
ಕೇರಳದ ಕಾನಂಗಾಡಿನಲ್ಲಿ ಗುರುವನ, ಪಾಪನಾಶಿನಿ ಗಂಗೆ ಸ್ವತಹ ಭಕ್ತರ ಜೊತೆಗೂಡಿ ನಿರ್ಮಿಸಿದ್ದಾರೆ. ನೀಲೇಶ್ವರದ ಮಹರಾಜರು ನಿತ್ಯಾನಂದ ಸ್ವಾಮಿಯವರಿಗೆ ಅವರ ಸೇವಾಕಾರ್ಯಕ್ಕೆ ಬೇಕಾದ ಎಲ್ಲಾ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದರು. ಕೇರಳದ ಗಡಿ ಭಾಗ, ಮಂಗಳೂರಿನ ಹಲವು ಕಡೆ ತುಳುನಾಡಿನ ಉದ್ದಗಲಗಳಲ್ಲಿ ನಿತ್ಯಾನಂದ ಸ್ವಾಮಿಗಳು ಸಂಚರಿಸಿ ಕಷ್ಟ ಕಾರ್ಪಣ್ಯದಲ್ಲಿ ಇರುವವರಿಗೆ ಕಷಗಳನ್ನು ಪರಿಹರಿಸಿರುವ ಮಹಾನ್ ಯೋಗಿಯನ್ನು ಜನ ಸಮೂಹ ನಿತ್ಯ ದರ್ಶನಕ್ಕಾಗಿ ಹಾತೋರೆಯುತ್ತಿದ್ದರು.
ಕೇರಳ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಚರಿಸಿದ ನಂತರ ಭಗವಾನ್ ನಿತ್ಯಾನಂದ ಸ್ವಾಮಿಗಳು ಮುಂಬೈ ಕಡೆಗೆ ತಮ್ಮ ಪಯಣವನ್ನು ಮುಂದುವರೆಸಿದರು. ಬೊರಿವೆಲಿಯ ಕೆನರಿ ಗುಹೆಯಲ್ಲಿ ಆರು ತಿಂಗಳು ಇದ್ದು ನಂತರ ಗಣೇಶಪುರಿಯಿಂದ ಮೂರು ಕಿ.ಮಿ. ದೂರದಲ್ಲಿ ಅಕ್ಲೋಲಿಯಲ್ಲಿ ಸ್ವಲ್ಪ ಸಮಯ ಇದ್ದು ನಂತರ ವಜ್ರೇಶ್ವರಿಗೆ ಬಂದು ದೇವಸ್ಥಾನದ ಹಿಂದೆ ವಾಸಿಸತೊಡಗಿದರು. ಇದೆ ಸಮಯದಲ್ಲಿ ನಾಥ ಮಂದಿರ ಜೀರ್ಣೊದ್ಧಾರ ಮಾಡಿದರು. ಶಾಲೆ, ಧರ್ಮಶಾಲೆ, ಅಸ್ಪತ್ರೆಯನ್ನು ಕಟ್ಟಿಸಿದರು.1937ರಲ್ಲಿ ವಜ್ರೇಶ್ವರಿಯಿಂದ ಗಣೇಶಪುರಿಗೆ ತೆರಳಿದರು. ನೀರಿನ ಅಭಾವ ಇದ್ದುದನ್ನು ಕಂಡು ಬಾವಿಯನ್ನು ತೋಡಿಸಿ ನೀರಿನ ಸಮಸ್ಯೆಯನ್ನು ಪರಿಹರಿಸಿದರು.
ನಿತ್ಯಾನಂದ ಸ್ವಾಮಿಯವರಿಗೆ ಮಕ್ಕಳೆಂದರೆ ತುಂಬಾ ಇಷ್ಟಪಡುತ್ತಿದ್ದರು. ಮಕ್ಕಳ ಕಲ್ಯಾಣಕ್ಕೆ, ವ್ಯಕ್ತಿತ್ವ ವಿಕಾಸಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿದ್ದಾರೆ. ಗಣೇಶಪುರಿಯ ಪರಿಸರದಲ್ಲಿ ಬಡ ಮಕ್ಕಳಿಗಾಗಿ ಭೋಜನ ಶಾಲೆ ಕಟ್ಟಿಸಿ ಪ್ರತಿನಿತ್ಯ ಅಹಾರ ಸ್ವೀಕರಿಸಿ ನಂತರ ಶಾಲೆಗೆ ಹೋಗುವ ವ್ಯವಸ್ಥೆ ಮಾಡಿದ್ದರು.
ಸಾಮೂಹಿಕ ಶ್ರಮದಿಂದ ಕಟ್ಟಿಸಿದ ಧರ್ಮ ಶಾಲೆ, ಆಶ್ರಮ, ರಸ್ತೆನಿರ್ಮಾಣ ಜೊತೆಗೆ ಆದಿವಾಸಿಗಳ ಕಲ್ಯಾಣ, ಆಶ್ಪçಸ್ಯ ನಿವಾರಣೆಗೆ ಕಳೆದ ಶತಮಾನದಲ್ಲೆ ಶ್ರಮಿಸಿದ್ದರು. ಜಾತ್ಯಾತೀತ ಸಮಾಜ ನಿರ್ಮಾಣ ಮಾಡಿರುವ ಶತಮಾನದ ಸಂತರಾಗಿ ನಿತ್ಯಾನಂದ ಭಗವಾನರು ಜನಮಾನಸದಲ್ಲಿ ದೈವೀ ಸ್ವರೂಪವನ್ನು ಪಡೆದಿದ್ದರು. ಗಣೇಶಪುರಿ ಕ್ರಿಯಾಜ್ಞಾನಗಳ ಪ್ರಾಯೋಗಿಕ ಪಟ್ಟಣವಾಗಿ ಪೂರ್ಣ ರೂಪಗೊಳ್ಳುವಂತೆ ಜನ ಸಮೂಹಕ್ಕೆ ಮಾರ್ಗದರ್ಶನ ನೀಡಿ ಸುತ್ತ ಮುತ್ತಲಿನ ಪರಿಸರದಲ್ಲಿ ವಿದ್ಯಾರ್ಜನೆಗೆ ಶಾಲೆ, ಹೋಟೆಲ್ ಗಳು, ಭೋಜನಶಾಲೆ, ಆಸ್ಪತ್ರೆ, ಧರ್ಮಚತ್ರಗಳು ಕಳೆದ ಶತಮಾನದಲ್ಲೇ ತಲೆ ಎತ್ತಿ ನಿಂತಿದೆ.
ಗಣೇಶಪುರಿಯ ಪಾವಿತ್ರತೆಯಲ್ಲಿ ಪ್ರಮುಖ್ವಾದುದು ಬಿಸಿನೀರಿನ ಕುಂಡ, ನೈಸರ್ಗಿಕವಾಗಿ ಭೂಮಿಯ ಅಡಿಯಿಂದ ಉಕ್ಕಿ ಬರುತ್ತಿರುವ ಬಿಸಿ ನೀರು ಗಂಧಕಾಮ್ಲ ಮಿಶ್ರಿತ ನೈಸರ್ಗಿಕವಾಗಿ ನಿತ್ಯ ತೀರ್ಥವಾಗಿದೆ. ಸ್ನಾನ ಮಾಡಿದರೆ ಯಾವುದೇ ಚರ್ಮರೋಗ ಬರುವುದಿಲ್ಲ, ಚರ್ಮರೋಗ ಇರುವವರು ಸ್ನಾನ ಮಾಡಿದರೆ ರೋಗ ವಾಸಿಯಾಗುವಂತಹ ದಿವ್ಯಔಷದ ಜಲವಾಗಿದೆ.
೧೯೬೧ ಆಗಸ್ಟ್ ೮ನೇ ತಾರೀಕಿನಮ್ದು ಶ್ರೀ ನಿತ್ಯಾನಂದ ಭಗವಾನರು ಲೌಕಿಕ ಲೋಕದಿಂದ ತಮ್ಮ ದೇಹವನ್ನು ಬಿಟ್ಟು ಆನಂತದಲ್ಲಿ ಲೀನವಾದರು. ಮರು ದಿನದಿಂದಲೇ ಎಂದಿನ ನಿಯಮದಂತೆ ಗಣೇಶಪುರಿಯಲ್ಲಿ ನಿತ್ಯಭಜನೆ, ಆನ್ನದಾಸೋಹ, ಮಹಾಮಂಗಾಳಾರತಿ, ಎಲ್ಲಾ ಸೇವಾಕಾರ್ಯಗಳು ನಿತ್ಯ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಇಂದಿಗೂ ತುಳುನಾಡಿನ ತುಳುವರು ಶ್ರೀ ಭಗಾವಾನ್ ನಿತ್ಯಾನಂದ ಸ್ವಾಮಿಗಳ ಅನುಯಾಯಿಗಳು, ಆರಾಧಕರು, ಭಕ್ತರು ವಿವಿಧ ಭಾಗಳಲ್ಲಿ ನಿರ್ಮಿಸಿರುವ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಗಳ ಮೂರ್ತಿಯ ದರ್ಶವನ್ನು ಪಡೆದು ಪುನೀತರಾಗಿದ್ದಾರೆ.
ವರದಿ- ಬಿ. ಕೆ. ಗಣೇಶ್ ರೈ
Comments are closed.