ಮಂಗಳೂರು: ಗುರುಗಳ ಸಮಾರಾಧನೆ ಅಂದರೆ ಭಗವಂತನ ಸಮಾರಾಧನೆ ಇದ್ದಂತೆ. ಅವರು ಸಮಾಜದ ಎಲ್ಲರ ಹೃದಯದಲ್ಲಿ ನೆಲೆಸಿದ ಭಗವಂತನನ್ನು ಕಂಡರು. ಮತ್ತೊಬ್ಬರಿಗೆ ಹಿತವಾಗುವಂತೆ ನಡೆದುಕೊಳ್ಳಬೇಕು ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ವಿಶ್ವೇಶತೀರ್ಥ ಶ್ರೀಪಾದರ ತೃತೀಯ ಸಂಸ್ಮರಣಾರ್ಥ ಕಲ್ಕೂರ ಪ್ರತಿಷ್ಠಾನವು ಗುರುವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ‘ಪೇಜಾವರ ವಿಶ್ವೇಶತೀರ್ಥ ನಮನ-2022’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಭಗವಂತನ ಆರಾಧನೆಗೆ ಮಲ್ಲಿಗೆ, ಕೇದಿಗೆಯಂತಹ ಪುಷ್ಪ ಬಳಸುವುದು ಸಾಮಾನ್ಯ. ಆದರೆ, ‘ಅಹಿಂಸಾ’ ಎಂಬ ಪ್ರಮುಖವಾದ ಪುಷ್ಪವನ್ನು ಬಳಸಿದರೆ ಭಗವಂತ ಸಂತೃಪ್ತನಾಗುತ್ತಾನೆ. ತ್ರಿಕರಣಪೂರ್ವಕವಾಗಿ ಸಮಾಜದ ಎಲ್ಲರ ಒಳಿತನ್ನು ಬಯಸಬೇಕು. ಯಾರಿಗೂ ಹಿಂಸೆ ಮಾಡಬಾರದು ಎಂಬುದನ್ನು ಉಪದೇಶ ಮಾಡಿದ್ದು ಮಾತ್ರವಲ್ಲ, ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದರು. ಹೀಗಾಗಿ, ಸಮಾಜದ ಎಲ್ಲ ಧರ್ಮೀಯರಲ್ಲಿ ವಿಶ್ವೇಶತೀರ್ಥರ ಬಗ್ಗೆ ಆರಾಧನಾ ಭಾವ ಇದೆ. ಗುಡಿಯೊಳಗಿನ ಭಗವಂತನ ಜತೆಗೆ ಸಮಾಜದ ಎಲ್ಲರ ಹೃದಯಲ್ಲಿ ನೆಲೆಸಿರುವ ಭಗವಂತನನ್ನು ದೀನರು, ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಆರಾಧಿಸಬೇಕು ಎಂಬ ಆದರ್ಶದ ಮಾರ್ಗವನ್ನು ತೋರಿದವರು ವಿಶ್ವೇಶತೀರ್ಥ ಶ್ರೀಪಾದರು ಎಂದರು.
ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮಾತನಾಡಿ, ‘ವಿಶ್ವೇಶತೀರ್ಥ ಶ್ರೀಗಳು ಸಂತರಿಗೆ ಗೌರವ ತಂದುಕೊಟ್ಟವರು. ವಾತ್ಸಲ್ಯ, ಕರುಣೆ, ಅನುಕಂಪ, ಇನ್ನೊಂದು ಧರ್ಮದ ಬಗ್ಗೆ ಇರುವ ಸಹಿಷ್ಣುತೆ, ಎಲ್ಲರನ್ನೂ ತಮ್ಮವರನ್ನಾಗಿ ಕಾಣುವ ಅಪರೂಪದ ವ್ಯಕ್ತಿತ್ವದವರು’ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಅನಿವಾಸಿ ಭಾರತೀಯ ಸಂಸ್ಥೆ ಮಾಜಿ ಅಧ್ಯಕ್ಷೆ ಡಾ. ಆರತಿ ಕೃಷ್ಣ ಇದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಅರವಿಂದ್ ಹಾಗೂ ಪೂರ್ಣಿಮಾ ರಾವ್ ಪೇಜಾವರ ನೇತೃತ್ವದಲ್ಲಿ ಗಾಯಕರು ಕೃಷ್ಣ ಗೀತ ಗಾಯನ ಪ್ರಸ್ತುತಪಡಿಸಿದರು.
ಉದ್ಯಮಿ ಹರೀಶ್ ಶೇರಿಗಾರ್ ಸಹಿತ ವಿವಿಧ ಕ್ಷೇತ್ರದ ಸಾಧಕರಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ:
ಮಾವಿನ ಕುಡಿಗೆ ವೆ.ಬ್ರಂ॥ ಶ್ರೀ ಸುಬ್ರಹ್ಮಣ್ಯ ಭಟ್ಟರು ಶ್ರೀಮತಿ ಶಾರದಮ್ಮನವರು (ವೈದಿಕ ದಂಪತಿ), ವೇದ ವಿದ್ವಾಂಸರಾದ ವೆ.ಮೂ ಹೃಷಿಕೇಶ್ ಬಾಯಿರಿ ಬಾರ್ಕೂರು, ಹಿರಿಯ ಯಕ್ಷಗಾನ ಕಲಾವಿದರಾದ ಕೋಳ್ಯೂರು ರಾಮಚಂದ್ರ ರಾವ್, ವಿಶ್ವನಾಥ ಶೆಣೈ ಉಡುಪಿ (ಸಾಮಾಜಿಕ ಸೇವೆ), ನರಸಿಂಹಮೂರ್ತಿ ಮಣಿಪಾಲ (ಸಾಮಾಜಿಕ ಸೇವೆ), ಭಾರತೀಯ ಸೇನೆಯಲ್ಲಿ ವೈದ್ಯಕೀಯ ಸೇವೆಸಲ್ಲಿಸಿದ ಕ್ಯಾ| ಡಾ| ಹೇಮಚಂದ್ರ ಹೊಳ್ಳ ಅಂಬಲಪಾಡಿ, ಡಾ| ಉಷಾ ಚಡಗ ಉಡುಪಿ (ಸಂಸ್ಕೃತ ಸಾಹಿತ್ಯ-ಸಂಶೋಧನೆ), ರಮೇಶ್ ರಾವ್ ಬೀಡು ಅಂಬಲಪಾಡಿ (ಸಾಮಾಜಿಕ ಸೇವೆ), ರಮೇಶ್ ರಾವ್ ಉಡುಪಿ (ಚಿತ್ರಕಲೆ), ಪ್ರಸಿದ್ಧ ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ, ಸಂಜೀವಿನಿ ಮುಂಬೈನ ಡಾ| ಸುರೇಶ ರಾವ್ ಕಟೀಲು, ಹಿರಿಯ ಸಾಹಿತಿ ಡಾ. ಕೆ. ರಮಾನಂದ ಬನಾರಿ, ಶ್ರೀಮತಿ ಎನ್. ಮನೋರಮ ತೋಳಾಡಿತ್ತಾಯ ಧರ್ಮಸ್ಥಳ (ಭಜನೆ), ಶೆಡ್ಡೆ ಮಂಜುನಾಥ ಭಂಡಾರಿ (ಸಾಮಾಜಿಕ ಸಂಘಟನೆ), ಡಾ.ಟಿ. ಶ್ಯಾಂ ಭಟ್ (ಸರಕಾರಿ ಸೇವೆ, ಸಾಂಸ್ಕೃತಿಕ ಸೇವೆ), ಡಾ| ಐ.ಜಿ. ಭಟ್ (ವೈದ್ಯಕೀಯ ಸೇವೆ), ಡಾ| ಪ್ರಭಾಕರ ರಾವ್ (ವೈದ್ಯಕೀಯ ಸೇವೆ), ಡಾ. ಜೀವರಾಜ್ ಸೊರಕೆ (ವೈದ್ಯಕೀಯ ಸೇವೆ), ಪ್ರೊ. ಜಿ.ಕೆ. ಭಟ್ ಸೇರಾಜೆ (ಶಿಕ್ಷಣ ಸಾಂಸ್ಕೃತಿಕ), ಎ.ಸಿ. ಭಂಡಾರಿ (ತುಳು ಸಾಹಿತ್ಯ, ಧಾರ್ಮಿಕ ಸೇವೆ), ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಪ್ರೊ ಜಿ.ಆರ್. ರೈ, ಹಿರಿಯ ಯಕ್ಷಗಾನ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ, ಆರೂರು ಪ್ರಭಾಕರ ರಾವ್ (ಸಾಮಾಜ ಸೇವೆ), ಶ್ರೀಮತಿ ಪ್ರತಿಭಾ ಆಚಾರ್ಯ ಕುಂಜಿಬೆಟ್ಟು, ಉಡುಪಿ (ಮಕ್ಕಳ ಸಾಹಿತ್ಯ), ನವಿ ಮುಂಬಯಿ ಘಲಿಯ ಅಣ್ಣ ಚಿನ್ನಯ ಶೆಟ್ಟಿ, ದುಬೈಯ ಉದ್ಯಮಿ, ಚಿತ್ರ ನಿರ್ಮಾಪಕ, ಸಾಹಿತ್ಯ ಸಂಘಟಕ ಹರೀಶ್ ಶೇರಿಗಾರ್, ಚೆನ್ನೈನ ಪಿ.ನಾರಾಯಣ ಭಟ್ (ಕರ್ನಾಟಕ ಸಂಘದ ಅಧ್ಯಕ್ಷರು, ತಮಿಳು ನಾಡು ಸಂಸ್ಕಾರ ಭಾರತಿಯ ಪ್ರಮುಖರು), ಹಿರಿಯ ನೃತ್ಯಗುರುಗಳಾದ ಕಮಲಾಕ್ಷ ಆಚಾರ್ ಬೆಳ್ತಂಗಡಿ, ಹಿರಿಯ ನೃತ್ಯಗುರುಗಳು ವಿದ್ವಾಂಸರಾದ ಉಳ್ಳಾಲ ಮೋಹನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
Comments are closed.