ಕರಾವಳಿ

ಆದಿವಾಸಿ ಬುಡಕಟ್ಟು ಸಮುದಾಯದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Pinterest LinkedIn Tumblr

ಮೂಲನಿವಾಸಿಗಳ ಆರೋಗ್ಯದ ಬಗ್ಗೆ ಸರ್ಕಾರದ ಕಾಳಜಿಯೂ ಅಗತ್ಯ: ಡಾ. ಅಶ್ವಿನಿ ಶೆಟ್ಟಿ

ಕುಂದಾಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಸಮಗ್ರ ಗ್ರಾಮೀಣ ಆಶ್ರಮ, ರಾಷ್ಟ್ರೀಯ ಸೇವಾ ಯೋಜನೆ, ಯೆನೆಪೋಯ ವಿಶ್ವ ವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಇವರ ಆಶ್ರಯದಲ್ಲಿ ಆದಿವಾಸಿ ಬುಡಕಟ್ಟು ಸಮುದಾಯದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಶುಕ್ರವಾರ ಕುಂದಾಪುರದ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು.

ಈ ಸಂದರ್ಭ ಯೆನೆಪೋಯ ಆಸ್ಪತ್ರೆ ಪ್ರಾಜೆಕ್ಟ್ ಇನ್‌ವೆಸ್ಟಿಗೇಟರ್ ಡಾ. ಅಶ್ವಿನಿ ಶೆಟ್ಟಿ ಮಾತನಾಡಿ, ಆದಿವಾಸಿ ಬುಡಕಟ್ಟು ಜನಾಂಗದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತಿದ್ದು, ಆರೋಗ್ಯವಂತರಲ್ಲಿ ಇರಬೇಕಾದಷ್ಟು ಹಿಮೋಗ್ಲೋಬಿನ್ ಪ್ರಮಾಣವು ಮೂಲ ನಿವಾಸಿಗಳಲ್ಲಿ ಕಡಿಮೆ ಇರುವುದು ಕಂಡು ಬರುತ್ತಿದ್ದು, ರಕ್ತಹೀನತೆ ಬೇರೆ ಬೇರೆ ಕಾಯಿಲೆಗಳಿದೂ ದಾರಿ ಮಾಡಿಕೊಡುತ್ತಿದೆ. ಮಹಿಳೆಯಲ್ಲಿ 12, ಪುರುಷರಲ್ಲಿ 14 ರಕ್ತದಲ್ಲಿ ಹಿಮೋಗ್ಲೋಬಿನ್ ಇರಬೇಕಿದ್ದು, ಹೆಚ್ಚಿನ ಮಹಿಳೆಯರಲ್ಲಿ ಅದರ ಪ್ರಮಾಣ ಬಹಳಷ್ಟು ಕಮ್ಮಿಯಿದೆ. ಹಿಮೋಗ್ಲೋಬಿನ್ ಕಡಿಮೆಯಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಜೊತೆ ಅರಿವು ಮೂಡಿಸುತ್ತಿದ್ದು, ರಾಜ್ಯದ 5 ಜಿಲ್ಲೆಯಲ್ಲಿ ಆದಿವಾಸಿ ಸಮುದಾಯದವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈಗಾಗಾಲೇ 2500 ಜನರ ಸ್ಕ್ರೀನಿಂಗ್ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.
ಸ್ಥನ ಕ್ಯಾನ್ಸರ್ ಹಾಗೂ ಗರ್ಭ ಕಂಠದ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಪತ್ತೆಹಚ್ಚಲು ಪ್ರತಿಯೊಬ್ಬ ಆದಿವಾಸಿ ಮಹಿಳೆಯರ ಆರೋಗ್ಯ ಸಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ಶಿಬಿರದಲ್ಲಿ ಏನು ಕಾಯಿಲೆ ಪತ್ತೆ ಮಾಡಿದ್ದೇವೋ ಅದಕ್ಕೆ ಆಸ್ಪತ್ರೆಯಲ್ಲಿ ಉಚಿತವಾಗಿ ಎರಡು ವರ್ಷ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ. 30 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದರು.

ಕುಂದಾಪುರ ಪುರಸಭಾ ಸದಸ್ಯ ಪ್ರಭಾಕರ್ ವಿ. ಕುಂದಾಪುರ ಶಿಬಿರಕ್ಕೆ ಚಾಲನೆ ನೀಡಿದರು. ಕೊರಗ ಸಮುದಾಯದ 150ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಪಾಲ್ಘೊಂಡರು.

ಕೊಗರ ಅಭಿವೃದ್ಧಿ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ಪುತ್ರನ್, ಯೆನೆಪೋಯ ಆಸ್ಪತ್ರೆ ಏಂಕೋಲಜಿ ವಿಭಾಗದ ಡಾ.ಲ್ಯಾನ್ಸಿ, ಡೆಂಟಲ್ ಕಾಲೇಜ್ ಡಾ. ಆಲೆನ್, ಸಮಗ್ರ ಗ್ರಾಮೀಣ ಆಶ್ರಮ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಇದ್ದರು.

ಮೂಲ ನಿವಾಸಿಗಳಿಗಳಲ್ಲಿ ಹೆಚ್ಚಿನವರಲ್ಲಿ ರಕ್ತಹೀನತೆ ಸಮಸ್ಯೆಯಿದ್ದು ಕಿಡ್ನಿ ಸಮಸ್ಯೆ ಕಾಡುತ್ತದೆ. ಆರೋಗ್ಯ ಕಾಳಜಿ ನಿಟ್ಟಿನಲ್ಲಿ ಯಾವ ಪೌಷ್ಟಿಕ ಆಹಾರ ಸೇವಿಸಬೇಕೆಂಬ ಅರಿವು ಕಡಿಮೆಯಿದ್ದು ಸರ್ಕಾರ ಬುಡಕಟ್ಟು ಜನಾಂಗದವರ ಆರೋಗ್ಯ ವಿಚಾರದಲ್ಲಿ ಇನ್ನಷ್ಟು ಮುತುವರ್ಜಿ ವಹಿಸಬೇಕಿದೆ. ಈ ಶಿಬಿರದ ಮೂಲಕ ಅರಿವು ನೀಡುವ ಕೆಲಸ ಮಾಡಲಾಗುತ್ತಿದೆ.
– ಡಾ. ಅಶ್ವಿನಿ ಶೆಟ್ಟಿ, ಪ್ರಾಜೆಕ್ಟ್ ಇನ್‌ವೆಸ್ಟಿಗೇಟರ್

Comments are closed.