ಕುಂದಾಪುರ: 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅ.28 ರಂದು ರಾಜ್ಯ ಸೇರಿದಂತೆ ವಿಶ್ವದ ಇತರೆ ಭಾಗದಲ್ಲಿರುವ ಕನ್ನಡಿಗರಿಂದ ಕನ್ನಡದ ಹಿರಿಮೆ ಸಾರುವ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ‘ಕೋಟಿ ಕಂಠ ಗಾಯನ’ ನಡೆಸಲು ಎಲ್ಲಾ ಅಗತ್ಯ ಸಿದ್ದತೆ ನಡೆಸಲಾಗುತ್ತಿದ್ದು ಕುಂದಾಪುರದಲ್ಲಿಯೂ ಮಾದರಿಯಾದ ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ತಿಳಿಸಿದರು.

ಮಂಗಳವಾರ ಸಂಜೆ ಇಲ್ಲಿನ ಮಿನಿವಿಧಾನಸೌಧದಲ್ಲಿ ವಿವಿಧ ಇಲಾಖಾಧಿಕಾರಿಗಳು, ಸಂಘಸಂಸ್ಥೆಗಳ ಉಪಸ್ಥಿತಿಯಲ್ಲಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅ. 28 ರಂದು ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೊದಲಿಗೆ ನಾಡ ಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ವಿಶ್ವ ವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು ಹಾಡಲಾಗುವುದು, ಈ ಹಾಡುಗಳನ್ನು ಹಾಡಲು ಅಗತ್ಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದರು. ಆಟೋ ಚಾಲಕರು, ಪೌರ ಕಾರ್ಮಿಕರು, ಗೇರು ಬೀಜ ಕಾರ್ಖಾನೆ ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳು , ಸರಕಾರಿ ನೌಕರರು ಸೇರಿದಂತೆ ಸಾರ್ವಜನಿಕರು ಭಾಗವಹಿಸಬೇಕು ಎಂದರು.
ತಹಶಿಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ಕಮ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ನಮ್ಮ ಜಿಲ್ಲೆಯವರಾಗಿದ್ದು ಕನ್ನಡಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಜಿಲ್ಲೆಯೊಂದರಲ್ಲೇ 5 ಲಕ್ಷ ಜನ ಸೇರಿಸಿ ಗಾಯನ ಕಾರ್ಯಕ್ರಮ ನಡೆಸಬೇಕೆಂದು ಮಾರ್ಗದರ್ಶನ ನೀಡಿದ್ದಾರೆ. ಒಂದು ಪ್ರದೇಶದಲ್ಲಿ ಕನಿಷ್ಠ 100 ಮಂದಿ ಸೇರಿ ಹಾಡುಗಳನ್ನು ಹಾಡಬೇಕು , ಜಿಲ್ಲೆಯ ಸಹಕಾರಿ ಸಂಘಗಳು ಮತ್ತು ಅಲ್ಲಿನ ಸಿಬ್ಬಂದಿಗಳು, ಕಾರ್ಖಾನೆಗಳ ಸಿಬ್ಬಂದಿಗಳು, ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳ ಎಲ್ಲಾ ಸಿಬ್ಬಂದಿ, ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಸಭೆಯಲ್ಲಿ ಭಾಗಹಿಸಿದ್ದ ಸಂಘಟನೆಗಳು ಮುಖಂಡರು ಈ ಕಾರ್ಯಕ್ರಮಕ್ಕೆ ತಮ್ಮ ಸಂಘದ ಸದಸ್ಯರೊಂದಿಗೆ ಭಾಗವಹಿಸುವುದಾಗಿ ತಿಳಿಸಿದ್ದಲ್ಲದೆ ಅಗತ್ಯ ಸಲಹೆ ನೀಡಿದರು. ಗಾಯಕ ಡಾ. ಗಣೇಶ್ ಗಂಗೊಳ್ಳಿ ಅಭಿಪ್ರಾಯ ಹಂಚಿಕೊಂಡರು. ಕಲಾಕ್ಷೇತ್ರ ಕುಂದಾಪುರದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ ಕುಂದಾಪುರದ ಗಾಂಧೀ ಮೈದಾನದಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿದಲ್ಲಿ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮ ಆಗಲಿದೆ ಎಂದರು. ಈ ಬಗ್ಗೆ ಇನ್ನೊಂದು ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲು ತಹಶಿಲ್ದಾರ್ ಅವರಿಗೆ ಎಸಿ ಸೂಚನೆ ನೀಡಿದರು.
ಸಭೆಯಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ್ ಕೆ. ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.
Comments are closed.