ಅನಿವಾಸಿ ಭಾರತೀಯರು

ತನ್ನೂರ ಹಿರಿಯ ನಾಗರಿಕರು ‘ಕಾಂತಾರ’ ನೋಡಲು ಮಾಲ್‌ನಲ್ಲಿ ಸ್ಕ್ರೀನ್ ಬುಕ್ ಮಾಡಿದ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಗ್ರಾಮೀಣ ಭಾಗದ ಜನರ ನಂಬಿಕೆಯನ್ನು ಹೆಚ್ಚಿಸುವಂತಹ ಗ್ರಾಮೀಣ ಭಾಗದ ಸೊಗಡನ್ನು ಬಿಂಬಿಸುವ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಲನಚಿತ್ರ ಅದ್ಬುತ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು ಅನಿವಾಸಿ ಕನ್ನಡಿಗ, ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ತನ್ನೂರಿನ ಜನರಿಗಾಗಿ ಮಾಲ್ ನಲ್ಲಿ ಒಂದು ಸ್ಕ್ರೀನ್ ಪಡೆದು ಸಿನೆಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.

ದುಬೈ ಮೂಲದ ಉದ್ಯಮಿಯಾಗಿರುವ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಆತ್ಮೀಯ ಸ್ನೇಹಿತರಾಗಿರುವ ರಿಶಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಲನಚಿತ್ರವನ್ನು ವೀಕ್ಷಿಸಲು ವಕ್ವಾಡಿಯ ಹಿರಿಯ ನಾಗರಿಕರಿಗೆ ಮಂಗಳವಾರ ಬೆಳಿಗ್ಗೆ 11:30ಕ್ಕೆ ಉಚಿತ ಪ್ರದರ್ಶನ ತೋರಿಸಲು ಮುಂದಾಗಿದ್ದು ಇದಕ್ಕಾಗಿ ಕೋಟೇಶ್ವರದ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ಒಂದು ಸ್ಕ್ರೀನ್ ವೆಚ್ಚ ಭರಿಸಿದ್ದಾರೆ.

ಬೆಳಿಗ್ಗೆ ಶೋಗೆ ಹಿರಿಯ ನಾಗರಿಕರು ಬಹಳಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದು ಇಂದು‌ ಮಿಸ್ ಮಾಡಿಕೊಂಡವರಿಗೆ ಮತ್ತೊಂದು ದಿನ ಉಚಿತ ಶೋ ತೋರಿಸುವ ಚಿಂತನೆ ಇದೆ ಎಂದು ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.

ಈ ಸಂದರ್ಭ ಮಾತನಾಡಿದ ಅವರು ದುಬೈ ಸಹಿತ ವಿದೇಶಗಳಲ್ಲಿ ಕೂಡ ಕಾಂತಾರ ಸಿನೆಮಾ ಅದ್ದೂರಿಯಾಗಿ ಪ್ರದರ್ಶನವಾಗುತ್ತಿದೆ. ದೈವ, ಧಾರ್ಮಿಕತೆ, ಆಚರಣೆ, ವೈಶಿಷ್ಟ್ಯತೆ ಸೊಗಡು ಹೊಂದಿರುವ ಚಿತ್ರವನ್ನು ಯಾರೂ ನೋಡದೇ ಇರಬಾರದು. ಈ ಚಿತ್ರಕ್ಕೆ ನಮ್ಮ ಪ್ರೋತ್ಸಾಹ ಅಗತ್ಯ ಎನ್ನುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ. ರಿಷಭ್ ನನ್ನ ಉತ್ತಮ ಗೆಳೆಯ. ಅಲ್ಲದೆ ಆತನ ಕುಟುಂಬ ಕೂಡ ಪರಿಚಯಸ್ಥರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲೆ, ದೈವೀಕತೆ, ಧಾರ್ಮಿಕತೆ ಹೊಂದಿರುವ ಕಾಂತಾರ ಸಿನೆಮಾ ಇದೀಗಾ ದೇಶ ವಿದೇಶಗಳಲ್ಲಿ ಸದ್ದು ಮಾಡಿದ್ದು ನಮಗೆಲ್ಲಾ ಹೆಮ್ಮೆ. ಕನ್ನಡ ಬಾರದವರೂ ಕೂಡ ಈ ಸಿನೆಮಾ ಮೆಚ್ಚಿಕೊಂಡಿದ್ದಾರೆ. ಸದ್ಯದಲ್ಲೇ ಇತರ ನಾಲ್ಕು ಭಾಷೆಗಳಲ್ಲಿ ಸಿನೆಮಾ ಬರಲಿದ್ದು ಐತಿಹಾಸಿಕ ದಾಖಲೆ ಮಾಡುತ್ತಿದೆ ಎಂದರು.

ರಿಷಬ್ ಹೀರೋ ಆಗುವ ಮೊದಲೇ ನನ್ನ ಗೆಳೆಯ. ಆತನ ಟ್ಯಾಲೆಂಟ್ ಉತ್ತಮವಾಗಿದ್ದು ಆತನಿಗೆ ಅಹಂ ಇಲ್ಲ. ರಿಷಬ್ ಡೌನ್ ಟು ಅರ್ಥ್ ಇರುವ ಕಾರಣಕ್ಕಾಗಿಯೇ ಈ ಸಿನೆಮಾ ಸಕ್ಸಸ್ ಆಗಿದೆ. ರಿಷಬ್ ನಮ್ಮೂರ ಕಲೆಯನ್ನು ಚಿತ್ರದ ಮೂಲಕ ಬಿಂಬಿಸಿ ಅದು ದಾಖಲೆಯಾಗಿದ್ದು ನಮಗೆಲ್ಲಾ ಹೆಮ್ಮೆ. ಕಾಂತಾರ ಸಿನೆಮಾಗೆ ಟಿಕೇಟ್ ಸಿಕ್ಕಿಲ್ಲ ಎಂದು ಕೂಡ ನನಗೆ ಕರೆ ಬರುತ್ತಿದ್ದು ಕನ್ನಡ ಸಿನೆಮಾ ಹೊರದೇಶ, ಹೊರರಾಜ್ಯದಲ್ಲಿ ಈ ರೀತಿ ಹಿಟ್ ಕಾಣುತ್ತಿರುವುದು ಸಂತಸವಾಗಿದೆ. ದುಬೈನಲ್ಲಿಯೂ ಸ್ನೇಹಿತರೆಲ್ಲಾ ಸೇರಿ ಒಂದು ಥಿಯೇಟರ್ ಬುಕ್ ಮಾಡಿದ್ದೆವು. ಕೋರೋನಾ ನಂತರ ನೊಂದುಕೊಂಡಿದ್ದ ಜನರು ಇದೀಗಾ ಹೊಸ ಲೋಕದತ್ತ ಮುಖಮಾಡಲು ಕಾಂತಾರ ಸಹಕಾರಿಯಾಗಿದೆ. ಸಿನಿಮಾ ಟಾಕೀಸ್ ನೋಡದವರು ಕೂಡ ಈಗ ಮತ್ತೆ ಬರುತ್ತಿದ್ದು 85 ವರ್ಷ ಪ್ರಾಯದ ನನ್ನ ತಂದೆ 35 ವರ್ಷದ ಬಳಿಕ ಸಿನೆಮಾ ಮಂದಿರಕ್ಕೆ ಬಂದು ಕಾಂತಾರ ವೀಕ್ಷಿಸಿದ್ದಾರೆ.
– ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ (ಕುಂದಾಪುರ ಮೂಲದ ದುಬೈ ಉದ್ಯಮಿ)

Comments are closed.