(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರದ ವತಿಯಿಂದ ಶ್ರೀ ನಾರಾಯಣ ಗುರು ಯುವಕ ಮಂಡಲದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನದ ಪ್ರಯುಕ್ತ ಬೃಹತ್ ಗುರು ಸಂದೇಶ ವಾಹನ ಜಾಥಾ ಹಾಗೂ ಗುರುವಂದನಾ ಕಾರ್ಯಕ್ರಮ ಭಾನುವಾರ ನಡೆಯಿತು.

ಶ್ರೀ ನಾರಾಯಣ ಗುರು ಮಂದಿರದಿಂದ ಆರಂಭಗೊಂಡ ಬೃಹತ್ ವಾಹನ ಜಾಥಾಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆ ನೀಡಿದರು. ಕುಂದಾಪುರದಿಂದ ಆರಂಭಗೊಂಡ ಬೃಹತ್ ಜಾಥವು ನಗರದಲ್ಲಿ ಸಾಗಿ ಸಂಗಮ್, ತಲ್ಲೂರು ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಮಿಸಿ ಹೆಮ್ಮಾಡಿಯಲ್ಲಿ ಸಂಪನ್ನಗೊಂಡಿತು.
ಹೆಮ್ಮಾಡಿಯಲ್ಲಿ ಗುರುವಂದನೆ ಕಾರ್ಯಕ್ರಮ:
ಹೆಮ್ಮಾಡಿ ಸಮೀಪದ ಸಂತೋಷನಗರ ಬಳಿ ಬಿಲ್ಲವ ಸಂಘದ ಶಿಕ್ಷಣ ಸಂಸ್ಥೆಗೆ ಕಾಯ್ದಿರಿಸಿದ ಸ್ಥಳದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮವನ್ನು ಉದ್ಯಮಿ ಸತೀಶ್ ಕೋಟ್ಯಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗುರುಗಳು ಸಂಘಟನೆಯಿಂದ ಬಲಯುತರಾಗಿರಿ, ವಿದ್ಯೆಯಿಂದ ಪ್ರಗತಿ ಹೊಂದಿ ಎನ್ನುವ ಸಂದೇಶವನ್ನು ದೇಶವ್ಯಾಪಿ ಸಾರಿದ್ದು, ಅದನ್ನು ನಾವೆಲ್ಲರೂ ಪಾಲಿಸಿ ಮುನ್ನಡೆಯುವ ಮೂಲಕ ಮುಂದಿನ ಪೀಳಿಗೆಗೂ ಅವರ ಆದರ್ಶ ಮಾದರಿಯನ್ನಾಗಿಸೋಣ ಎಂದರು.

ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ ಮಹಾನ್ ಸಂತ ನಾರಾಯಣ ಗುರುಗಳು ಸಂಘಟನೆ ಹಾಗೂ ಶಿಕ್ಷಣದಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ. ಅದರಂತೆ ಈ ಜಾಗದಲ್ಲಿ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು, ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿ, ನಮ್ಮ ಸಮಾಜದ ಮಕ್ಕಳ ವಿದ್ಯಾರ್ಜನೆಗೆ ಅನುಕೂಲವಾಗುವ ಕಾರ್ಯವಾಗಬೇಕಿದೆ ಎಂದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಪೂಜಾರಿ ವಿಠಲವಾಡಿ, ಬಸವ ಪೂಜಾರಿ ಹೊದ್ರಾಳಿ, ಕೋಶಾಧಿಕಾರಿ ಶಿವಾನಂದ ಗಂಗೊಳ್ಳಿ, ಸಂಘಟನಾ ಕಾರ್ಯದರ್ಶಿ ಆನಂದ ಪೂಜಾರಿ ಕೊಡೇರಿ, ಮಹಿಳಾ ಘಟಕಾಧ್ಯಕ್ಷೆ ಸುಮನಾ ಬಿದ್ಕಲ್ಕಟ್ಟೆ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ಹೆಮ್ಮಾಡಿ ಮೂರ್ತೆದಾರರ ಸಹಕಾರಿ ಸಂಘದ ಜನಾರ್ದನ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಕಡ್ಗಿಮನೆ ಸ್ವಾಗತಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ಗಂಗನಹಿತ್ಲು ವಂದಿಸಿದರು.
ಶ್ರೀ ನಾರಾಯಣ ಗುರುಗಳು ಮೌಢ್ಯ, ಅಸ್ಪೃಶ್ಯತೆ ವಿರುದ್ಧ ಬ್ರಿಟಿಷರ ಕಾಲದಲ್ಲಿಯೇ ಧ್ವನಿಯೆತ್ತಿದವರು. ಆ ಕಾಲದಲ್ಲೆ ಸಾಮಾಜಿಕ ಪಿಡುಗಗಳ ವಿರುದ್ಧ ಹೋರಾಟ ಮಾಡಿ ಹಿಂದುಳಿದ ವರ್ಗದವರಿಗೆ ನ್ಯಾಯ ದೊರಕಿಸಿಕೊಟ್ಟ ಸಾಧಕರು. ಅವರ ಹೆಸರಲ್ಲಿ ಇಲ್ಲೊಂದು ಶಿಕ್ಷಣ ಸಂಸ್ಥೆ ನಿರ್ಮಿಸಿ, ಆ ಮೂಲಕ ಸಮಾಜದ ನೂರಾರು ಮಂದಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ಒದಗಿಸುವ ಯೋಜನೆ ಸಂಘದ್ದಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯವಿದೆ.
– ಅಶೋಕ ಪೂಜಾರಿ ಬೀಜಾಡಿ (ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ)
Comments are closed.