ಕರಾವಳಿ

ಬೇಟೆಯಾಡಿ ಕಡವೆ ಮಾಂಸ ಸಾಗಿಸುತ್ತಿದ್ದಾಗ ಬೈಂದೂರಿನಲ್ಲಿ 19 ಕೆ.ಜಿ ಮಾಂಸ ಸಹಿತ ಇಬ್ಬರ ಸೆರೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಡವೆಯನ್ನು ಭೇಟೆಯಾಡಿ 19 ಕಿ.ಲೋ ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿದ್ದು ಈ ಪ್ರಕರಣ ವನ್ಯಜೀವಿ ಕಾಯ್ದೆಯಡಿ ಬರುವ ಹಿನ್ನೆಲೆ ಹೆಚ್ಚಿನ ತನಿಖೆಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಒಪ್ಪಿಸಿದ ಘಟನೆ‌ ಬೈಂದೂರು ಶಿರೂರು ಬಳಿ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿಯ ಅನತಿ ದೂರದಲ್ಲಿ ನಡೆದಿದೆ.

ಮೂಲತಃ ಭಟ್ಕಳದವರಾದ ಮೊಹಮ್ಮದ್ ನಾಸೀರ್ (35), ಅಬ್ದುಲ್ ಅಲೀಂ (23) ಬಂಧಿತ ಆರೋಪಿಗಳು.‌ ಬಂಧಿತರಿಂದ ಕಡವೆ ಮಾಂಸ, ಹಾಗೂ ಸಾಗಾಟಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ: ಕುಂದಾಪುರ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ. , ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಬೈಂದೂರು ಪಿಎಸ್ಐ ನಿರಂಜನ ಗೌಡ ಹಾಗೂ ಸಿಬ್ಬಂದಿಗಳು ಒತ್ತಿನೆಣೆ ಹೆದ್ದಾರಿ ಬಳಿ ಗಸ್ತಿನಲ್ಲಿದ್ದಾಗ ಅನುಮಾನದ ಮೇರೆಗೆ ಕುಂದಾಪುರ ಕಡೆಯಿಂದ ಭಟ್ಕಳ ಭಾಗದತ್ತ ತೆರಳುತ್ತಿದ್ದ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದು ಸವಾರರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನತ್ತಿದ ಪೊಲೀಸರು ಬಹಳಷ್ಟು ದೂರ ಸಾಗಿ ಆರೋಪಿಗಳ ಸಹಿತ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

ಅದರಲ್ಲಿ ಬೇಟೆಯಾಡಿದ ಕಡವೆ ಮಾಂಸ ಇರುವುದು ಖಾತ್ರಿಯಾಗಿದ್ದು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸ, ಪ್ರಕರಣ ವನ್ಯಜೀವಿ ಕಾಯ್ದೆಯಡಿ ದಾಖಲಾಗಬೇಕಾದ ಹಿನ್ನೆಲೆ ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಬೈಂದೂರು ವಲಯ ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿತ್ತು. ಬೈಂದೂರು ವಲಯಾರಣ್ಯಾಧಿಕಾರಿ ಸಿದ್ದೇಶ್ವರ್ ಹಾಗೂ ಸಿಬ್ಬಂದಿಗಳ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದು ಇನ್ನಷ್ಟು ಹೆಚ್ಚಿನ ತನಿಖೆಗೆ ಮತ್ತೆ ಅರಣ್ಯಾಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆಗಳಿದೆ ಎನ್ನಲಾಗಿದೆ.

Comments are closed.