ಕರಾವಳಿ

ಕುಂದಾಪುರ ಹೆದ್ದಾರಿ ಫ್ಲೈ ಓವರ್ ಮೇಲೆ ವಿದ್ಯುತ್ ಶಾಕ್ ಭೀತಿ; ವಿಡಿಯೋ ವೈರಲ್

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿನ ದಾರಿ ದೀಪಗಳಿಗೆ ಸಂಪರ್ಕಿಸಲಾದ ವಿದ್ಯುತ್ ಹೆದ್ದಾರಿ ಮೇಲೆ ಪ್ರವಹಿಸಿರುವುದನ್ನು ಟೆಸ್ಟರ್ ಮೂಲಕ ಸಾರ್ವಜನಿಕರು ತೋರಿಸಿದ ವಿಡಿಯೋ ವೈರಲ್ ಆಗಿದೆ. ಕುಂದಾಪುರದ ಶಾಸ್ತ್ರಿ ವೃತ್ತದ ಮೇಲ್ಬಾಗದ ಫ್ಲೈ ಓವರ್ ನಲ್ಲಿ ಈ ಘಟನೆ ನಡೆದಿದೆ.

ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದ ನವಯುಗ ಕಂಪೆನಿಯು ಕೆಲ ತಿಂಗಳ ಹಿಂದೆ ದಾರಿದೀಪಗಳ ಸಂಪರ್ಕ ಕಲ್ಪಿಸಿತ್ತು. ಮಳೆಯ ಹಿನ್ನೆಲೆ ವಾಹನ ಸವಾರರು ಫ್ಲೈಓವರ್ ಮೇಲೆ ನಿಂತಿದ್ದ ಸಂದರ್ಭ ಫ್ಲೈಓವರ್ ತಡೆಗೋಡೆ ಭೀಮ್’ನಲ್ಲಿ ಒಂದು ಕಡೆ ವಿದ್ಯುತ್ ಪ್ರವಹಿಸುತ್ತಿರುವುದು ತಿಳಿದಿದೆ. ಕೂಡಲೇ ಟೆಸ್ಟರ್ ತಂದು ಪರಿಶೀಲಿಸಿದಾಗ ಟೆಸ್ಟರ್’ನಲ್ಲಿ ಬೆಳಕು ಬಂದಿದ್ದು ವಿದ್ಯುತ್ ಪ್ಲೋವಿಂಗ್ ಖಾತ್ರಿಯಾಗಿದೆ.

ಕೂಡಲೇ ಎಚ್ಚೆತ್ತುಕೊಂಡ ಮೆಸ್ಕಾಂ ಇಲಾಖೆಯವರು ರಾ.ಹೆದ್ದಾರಿ ದಾರಿದೀಪದ ವಿದ್ಯುತ್ ಸಂಪರ್ಕ ಖಡಿತಗೊಳಿಸಿ ಸಂಭವ್ಯ ಅವಘಡ ತಪ್ಪಿಸಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ವಯರಿಂಗ್ ನಲ್ಲಿ ಉಂಟಾದ ತಾಂತ್ರಿಕ‌ ಸಮಸ್ಯೆಯಿಂದ ಈ ರೀತಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಹೆದ್ದಾರಿ ದಾರಿದೀಪದ ನಿರ್ವಹಣೆ ನವಯುಗ ಕಂಪೆನಿ‌ ಮಾಡಬೇಕಿರುವುದರಿಂದ ಅವರಿಗೆ ಸೂಚನೆ ನೀಡಲಾಗಿದ್ದು ತಕ್ಷಣ ಸಮಸ್ಯೆ ಪರಿಹರಿಸುವ ಬಗ್ಗೆ ಆದೇಶ ನೀಡಲಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ತಿಳಿಸಿದ್ದಾರೆ.

Comments are closed.