(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಕೊಂಕಣ ರೈಲ್ವೆ ನಿಗಮದ ವಾಣಿಜ್ಯ ಮತ್ತು ಪರಿಚಾಲನೆ ವಿಭಾಗ ಮುಖ್ಯಸ್ಥ ಸಂತೋಷ್ ಕುಮಾರ್ ಝಾ ಶುಕ್ರವಾರ ಭೇಟಿ ನೀಡಿ, ಇಲ್ಲಿನ ಅಧಿಕಾರಿಗಳು ಹಾಗೂ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯೊಂದಿಗೆ ಸಭೆ ನಡೆಸಿದರು.


ಕುಂದಾಪುರದ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿ ವತಿಯಿಂದ ಹಲವು ಬೇಡಿಕೆಗಳನ್ನು ಈ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಅವರು, ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಕುಂದಾಪುರದ ರೈಲು ನಿಲ್ದಾಣ, ಇಲ್ಲಿನ ಪ್ರಯಾಣಿಕರ ಹಿತದೃಷ್ಟಿಯಿಂದ ಅನೇಕ ವಿಚಾರಗಳ ಕುರಿತಂತೆ ಚರ್ಚೆ ನಡೆಯಿತು.
ಈ ಹಿಂದಿದ್ದ ಕುಂದಾಪುರ – ಮೈಸೂರು ರೈಲು ಸಂಚಾರ ಪುನರ್ ಆರಂಭಿಸಬೇಕು ಎನ್ನುವ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಂತೋಷ್ ಕುಮಾರ್ ಝಾ ಅವರು, ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಕಾರವಾರ – ಕುಂದಾಪುರ- ತಿರುಪತಿಗೆ ನೇರ ರೈಲು ಕಲ್ಪಿಸಿದರೆ ಈ ಭಾಗದ ಯಾತ್ರಾರ್ಥಗಳಿಗೆ ಅನುಕೂಲವಾಗಲಿದೆ ಎಂದು ಸಮಿತಿಯು ಮನವಿ ಮಾಡಿತು. ಇದಕ್ಕುತ್ತರಿಸಿದ ಅಧಿಕಾರಿಗಳು, ಇದು ಕೊಂಕಣ ರೈಲ್ವೇ ಮಾತ್ರವಲ್ಲದೆ ಇತರೆ ನಿಗಮಗಳ ಸಹಕಾರವು ಅಗತ್ಯವಿದ್ದು, ಸಂಬಂಧಪಟ್ಟವರಲ್ಲಿ ಮಾತನಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಮುಂಬಯಿಯಿಂದ ಮಂಗಳೂರಿಗೆ ಬರುವ ನೇತ್ರಾವತಿ ಎಕ್ಸ್ಪ್ರೆಸ್ ರೈಲಿಗೆ ಕುಂದಾಪುರದಲ್ಲಿ ನಿಲುಗಡೆಯಿಲ್ಲ. ಇದರಿಂದ ಕುಂದಾಪುರ ಭಾಗದ ರೈಲ್ವೇ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಅಹವಾಲು ಕೇಳಿ ಬಂತು. ಈ ಬೇಡಿಕೆಯನ್ನು ರೈಲ್ವೆ ಮಂಡಳಿ ಗಮನಕ್ಕೆ ತರುವ ಭರವಸೆ ನೀಡಿದರು.
ಸಭೆಯಲ್ಲಿ ಕೊಂಕಣ ರೈಲ್ವೆಯ ಕಾರವಾರ ಪ್ರಾದೇಶಿಕ ಕಚೇರಿಯ ಕ್ಷೇತ್ರಿಯ ರೈಲ್ವೇ ಪ್ರಬಂಧಕ ಬಿ.ಬಿ. ನಿಕ್ಕಂ, ಮುಖ್ಯ ವಾಣಿಜ್ಯ ಪ್ರಬಂಧಕ ಎಲ್.ಕೆ. ವರ್ಮಾ, ಹಿರಿಯ ಪ್ರಾದೇಶಿಕ ಪರಿಚಾಲನಾ ಪ್ರಬಂಧಕ ಎಸ್. ವಿನಯ್ ಕುಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ಸದಸ್ಯರಾದ ಗೌತಮ್ ಶೆಟ್ಟಿ, ವಿವೇಕ್ ನಾಯಕ್, ಪ್ರವೀಣ್ ಕುಮಾರ್, ಸುಧಾಕರ ಶೆಟ್ಟಿ, ಉದಯ ಭಂಡಾರ್ಕಾರ್, ರಾಘವೇಂದ್ರ ಶೇಟ್, ನಾಗರಾಜ್ ಆಚಾರ್, ಜೋಯ್ ಕರ್ವಾಲೋ, ಪದ್ಮನಾಭ ಶೆಣೈ, ಧರ್ಮಪ್ರಕಾಶ್ ಮೊದಲಾದವರಿದ್ದರು.
Comments are closed.