ಕರಾವಳಿ

ಪ್ರೀತಿ-ಪ್ರೇಮ, ಮದುವೆಯಾಗುವ ಭರವಸೆ ನೀಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ವಿವಾಹಿತನಿಗೆ 20 ವರ್ಷ ಜೈಲು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆ ಇಚ್ಚೆಯ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಉಡುಪಿಯ ಕೊಡವೂರು ನಿವಾಸಿ ಕಿರಣ್ (28) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.

ಸಂತ್ರಸ್ತ ಬಾಲಕಿ 16 ವರ್ಷದವಳಾಗಿದ್ದು ಆಕೆ ಶಾಲೆಗೆ ಹೋಗುವಾಗ ಪ್ರೀತಿ-ಪ್ರೇಮದ ನಾಟಕವಾಡಿ ಬಲೆಗೆ ಬೀಳಿಸಿಕೊಂಡ ಆತ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ನಿರ್ಜನ ಹಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಇದನ್ನು ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾಗಿಯೂ ವೈರಲ್ ಮಾಡುವುದಾಗಿ ಬೆದರಿಸಿ ಮತ್ತೆ 2-3 ಬಾರಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರ ತಿಳಿದ ಆರೋಪಿ ಕಿರಣ್ ಸಹೋದರಿ ಯುವತಿ ಬಳಿ ಬಂದು ಆತನನ್ನು ಮದುವೆ ಮಾಡಿಸುವುದಾಗಿಯೂ ಈ ವಿಚಾರವನ್ನು ಯಾರಲ್ಲಿಯೂ ಹೇಳದಂತೆ ಮಾತುಕತೆ ನಡೆಸಿದ್ದಳು. ಸಂತ್ರಸ್ತೆ ಮನೆ ಸಮೀಪದವರು ಇವರಿಬ್ಬರ ಚಲನವಲನದ ಬಗ್ಗೆ ಬಾಲಕಿ ಪೋಷಕರ ಗಮನಕ್ಕೆ ತಂದಿದ್ದು ಅವರು ಆಕೆ ಬಳಿ ಕೂಲಂಕಷವಾಗಿ ವಿಚಾರಿಸಿದಾಗ ನಡೆದ ಘಟನೆಯನ್ನು ಹೇಳಿದ್ದಾಳೆ. ಬಳಿಕ ಪೋಷಕರು ಆಕೆಗೆ ಧೈರ್ಯ ತುಂಬಿದ್ದು ಉಡುಪಿ ಮಹಿಳಾ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಳು. ಅದರಂತೆ ಕಿರಣ್ ಹಾಗೂ ಆತನ ಸೋದರಿ ಬಂಧನವಾಗಿತ್ತು. ಬಳಿಕ ಅವರಿಬ್ಬರು ಜಾಮೀನು ಪಡೆದಿದ್ದರು. ಅಂದಿನ ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ಕಲಾವತಿಯವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಒಟ್ಟು 28 ಸಾಕ್ಷಿಗಳಲ್ಲಿ 12 ಸಾಕ್ಷಿ ವಿಚಾರಣೆ ನಡೆದಿದ್ದು ನೊಂದ ಬಾಲಕಿ ನುಡಿದ ಸಾಕ್ಷಿ, ಸಾಂದರ್ಭಿಕ ಸಾಕ್ಷಿಗಳು ಹಾಗೂ ಆರೋಪಿ ಕಿರಣ್ ಈ ಮೊದಲೇ ಬೇರೊಂದು ಮದುವೆಯಾದ ಬಗ್ಗೆ ಪೂರಕ ಸಾಕ್ಷಿಗಳು ಈತನೇ ದೋಷಿ ಎಂಬುದನ್ನು ದೃಢಪಡಿಸುವಲ್ಲಿ ಅಭಿಯೋಜನೆಗೆ ಸಹಕಾರಿಯಾಗಿತ್ತು. ಕಿರಣ್ ಸಹೋದರಿ ಮೇಲಿನ ದೋಷಾರೋಪಣೆ ರುಜುವಾತಾಗದ ಹಿನ್ನೆಲೆ ದೋಷಮುಕ್ತಿಗೊಳಿಸಲಾಗಿದೆ.

ಅಪರಾಧಿ ಕಿರಣ್ ಗೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಪೋಕ್ಸೋ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಬೆದರಿಕೆ ಹಾಕಿದ್ದಕ್ಕೆ 1 ವರ್ಷ ಜೈಲು, 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಶಿಕ್ಷೆ ಮತ್ತು ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿದೆ.

ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.

 

Comments are closed.