ಉಡುಪಿ: ಕೆಲ ಬಿಜೆಪಿ ಮುಖಂಡರು ಆರೋಪಿಗಳಾಗಿರುವ ಕೋಟ ಅವಳಿ ಕೊಲೆ ಪ್ರಕರಣ ಹಾಗೂ ಯಡಮೊಗೆ ಉದಯ ಗಾಣಿಗ ಹತ್ಯೆ ಪ್ರಕರಣಗಳಲ್ಲಿ ವಾದ ಮಂಡಿಸುತ್ತಿರುವ ಕುಂದಾಪುರ ನ್ಯಾಯಾಲಯದ ಸರಕಾರಿ ಅಭಿಯೋಜಕ(ಪಿಪಿ) ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಗೃಹ ಸಚಿವರು, ಕಾಣದ ಕೈಗಳ ಜೊತೆ ಸೇರಿಕೊಂಡು ರಾಜಕೀಯ ಪ್ರೇರಿತವಾಗಿ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಕೋಟ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2019ರ ಜ.26ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭರತ್ ಹಾಗೂ ಯತೀಶ್ ಅವಳಿ ಕೊಲೆ ಪ್ರಕರಣದಲ್ಲಿ ಮತ್ತು 2021ರ ಜೂ.5ರಂದು ಕುಂದಾಪುರ ತಾಲೂಕಿನ ಯಡಮೊಗೆಯಲ್ಲಿ ನಡೆದ ಉದಯ ಗಾಣಿಗ ಕೊಲೆ ಪ್ರಕರಣಗಳಲ್ಲಿ ಬಿಜೆಪಿ ಉನ್ನತ ಸ್ಥಾನದಲ್ಲಿದ್ದವರು ಪ್ರಮುಖ ಆರೋಪಿಗಳಾಗಿದ್ದಾರೆ. ಈ ಪ್ರಕರಣಗಳಲ್ಲಿ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಉತ್ತಮವಾಗಿ ವಾದ ಮಂಡಿಸಿ, ಆರೋಪಿಗಳಿಗೆ ಜಾಮೀನು ದೊರೆಯದಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಕೋಟ ಅವಳಿ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆ ಕೊನೆಯ ಹಂತದಲ್ಲಿದೆ. ಮುಂದೆ ಹೊಸ ಸರಕಾರಿ ಅಭಿಯೋಜಕರು ಬಂದರೆ ಆ ಪ್ರಕರಣದ ಬಗ್ಗೆ ಅಧ್ಯಯನ ಮಾಡಲು ಕಷ್ಟವಾಗುತ್ತದೆ. ನಮಗೆ ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಪ್ರಕಾಶ್ಚಂದ್ರ ಶೆಟ್ಟಿ ಅವರನ್ನೇ ಮುಂದುವರೆಸ ಬೇಕು ಎಂದು ಅವರು ಒತ್ತಾಯಿಸಿದರು.
ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಒಂದು ವರ್ಷದ ಅವಧಿಗೆ ಕುಂದಾಪುರದಲ್ಲೇ ಮುಂದುವರೆಸಬೇಕೆಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಜು.10ರಂದು ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಸಚಿವರು ಸರಿಯಾಗಿ ಸ್ಪಂದಿಸಿಲ್ಲ ಎಂದು ಅವರು ದೂರಿದರು.
ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿರುವ ಪ್ರಕಾಶ್ಚಂದ್ರ ಶೆಟ್ಟಿ, ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 35ಕ್ಕೂ ಅಧಿಕ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಗೆ ಗುರಿಯಾಗುವಂತೆ ಸರ್ಕಾರದ ಪರ ವಾದ ಮಂಡಿಸಿದ್ದಾರೆ. ನಿಷ್ಠಾವಂತ ಅಧಿಕಾರಿಗಳಿಗೆ ಬೆಲೆ ಇಲ್ಲವಾದರೆ ಇವರು ಯಾರಿಗೂ ನ್ಯಾಯ ಕೊಡುವುದಕ್ಕೆ ಗೃಹ ಸಚಿವರಾಗಿರಬೇಕು. ನ್ಯಾಯ ಕೊಡಲು ಸಾಧ್ಯ ವಾಗದಿದ್ದರೆ ರಾಜೀನಾಮೆ ಕೊಡಲಿ. ಅಂತಹ ಸ್ಥಾನದಲ್ಲಿರಲು ಅವರು ನಾಲಾಯಕ್ಕು ಎಂದು ಅವರು ಕಟುವಾಗಿ ಟೀಕಿಸಿದರು.
ಅವಳಿ ಕೊಲೆ ಪ್ರಕರಣದ ತೀರ್ಪು ಬರುವವರೆಗೆ ಪ್ರಕಾಶ್ಚಂದ್ರ ಶೆಟ್ಟಿ ಅವರ ವರ್ಗಾವಣೆ ರದ್ದುಗೊಳಿಸಿ, ಅವರನ್ನು ಈ ಸ್ಥಳದಲ್ಲಿಯೇ ಮುಂದುವರೆಸಬೇಕು. ಒಂದು ವೇಳೆ ನ್ಯಾಯ ಸಿಗದಿದ್ದರೆ ಮುಂದಿನ ವಾರ ಬೆಂಗಳೂರಿನ ವಿಧಾನ ಸೌಧದ ಎದುರಿನ ಗಾಂಧಿ ಪ್ರತಿಮೆಯ ಮುಂದೆ ನೊಂದ ತಾಯಂದಿರು ಹಾಗೂ ಮಕ್ಕಳು ಮತ್ತು ಸಾರ್ವಜನಿಕರು ಸೇರಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೊಲೆಯಾದ ಭರತ್ ತಾಯಿ ಪಾರ್ವತಿ, ಜ್ಯೋತಿ ಉದಯ ಗಾಣಿಗ, ದಿನಕರ ಗಾಣಿಗ ಮೊದಲಾದವರು ಹಾಜರಿದ್ದರು.
‘ಸರಕಾರದ 5 ಲಕ್ಷ ಪರಿಹಾರ ಇನ್ನೂ ಸಿಕ್ಕಿಲ್ಲ’
ಉದಯ ಗಾಣಿಗ ಹತ್ಯೆಗೀಡಾದಾಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಶಿಫಾರಸ್ಸಿನ ಮೇರೆಗೆ ಸರಕಾರ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿತು. ಆದರೆ ಈವರೆಗೆ ಆ ಪರಿಹಾರ ಹಣ ಸಿಕ್ಕಿಲ್ಲ. ಅಲ್ಲದೆ ಒಬ್ಬ ಸಚಿವ ಕೂಡ ಅವರ ಮನೆಗೆ ಭೇಟಿ ನೀಡಿಲ್ಲ. ಈ ರೀತಿಯಾಗಿ ಅವರ ಮೇಲೆ ಕಾಣದ ಕೈಗಳು ಒತ್ತಡ ಹೇರುತ್ತಿದೆ ಎಂದು ದಿನೇಶ್ ಗಾಣಿಗ ಆರೋಪಿಸಿದರು.
ಕೊಲೆಯಾದ ಹರ್ಷ, ಪರಮೇಶ್ ಮೆಸ್ತರಿಗೆ ಸರಕಾರ ಪರಿಹಾರ ಹಣ ಘೋಷಣೆ ಮಾಡಿ ಕುಟುಂಬದವರಿಗೆ ನೀಡುತ್ತದೆ. ಆದರೆ ಇಲ್ಲಿ ಉದಯ ಗಾಣಿಗ ಕುಟುಂಬ ಏನು ತಪ್ಪು ಮಾಡಿದೆ. ಯಾವುದೇ ಮಂತ್ರಿ ಕೂಡ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿಲ್ಲ. ಯಾಕೆಂದರೆ ಇವರಿಗೆ ಇಲ್ಲಿ ರಾಜಕೀಯ ಬೇಳೆ ಬೇಯಿಸಲು ವಿಷಯ ಸಿಗುತ್ತಿಲ್ಲ. ಎಲ್ಲಿಯಾದರೂ ಮುಸ್ಲಿಮರು ಕೊಲೆ ಮಾಡುತ್ತಿದ್ದಾರೆ ಬರುತ್ತಿದ್ದಾರೇನು? ಆದರೆ ಇಲ್ಲಿ ಕೊಂದಿ ರುವುದು ಬಿಜೆಪಿಯವರೇ ಆಗಿದ್ದಾರೆ ಎಂದು ಅವರು ಟೀಕಿಸಿದರು.
“ಬೈಂದೂರು ಶಾಸಕರು ಒಂದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಒಂದು ವರ್ಷವಾದರೂ ಕೊಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕೆ ಮೊನ್ನೆ ಬಂದು ಪರಿಹಾರ ಹಣ ನೀಡಿದ್ದಾರೆ. ಜಾಗದ ಹಕ್ಕುಪತ್ರ ಕೂಡ ಇನ್ನು ಕೂಡ ಮಾಡಿಕೊಟ್ಟಿಲ್ಲ”
–ಜ್ಯೋತಿ, ಉದಯ ಗಾಣಿಗರ ಪತ್ನಿ
Comments are closed.