ಶಿವಮೊಗ್ಗ: ಅಡುಗೆ ಮಾಡುವಾಗ ಹಾವು ಕಚ್ಚಿ ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿಗೆಬೆಸಿಗೆ ಗ್ರಾಮದಲ್ಲಿ ನಡೆದಿದೆ.

ಸೌಮ್ಯ (24) ಮೃತಪಟ್ಟ ಗೃಹಿಣಿ. ಸೌಮ್ಯ ಅಡುಗೆ ಮಾಡಲು ಅಡುಗೆ ಮನೆಗೆ ತೆರಳಿದ್ದ ವೇಳೆ ಅಲ್ಲಿಯೇ ಇದ್ದ ವಿಷಕಾರಿ ಹಾವು ಸೌಮ್ಯ ಕಾಲಿಗೆ ಕಚ್ಚಿದೆ. ಆದರೆ ಹಾವು ಕಚ್ಚಿರುವುದು ಸೌಮ್ಯಗೆ ತಿಳಿದಿಲ್ಲ. ಸ್ವಲ್ಪ ಸಮಯದ ಬಳಿಕ ಕಾಲಿನಲ್ಲಿ ಊತ ಕಾಣಿಸಿಕೊಂಡು ತೀವ್ರ ನೋವು ಉಂಟಾಗಿದೆ. ಹಾವು ಕಚ್ಚಿರುವ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹೊಸನಗರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಹೊಸನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸೌಮ್ಯ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸೌಮ್ಯ ನಾಲ್ಕು ವರ್ಷದ ಹಿಂದೆ ನಾಗರಾಜ ಎನ್ನುವರ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ಮೂರು ವರ್ಷದ ಗಂಡು ಮಗವಿತ್ತು.
ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.