ಕರಾವಳಿ

ಕೆಲವು ತಗಡುಗಳು, ಸೋಕಾಲ್ಡ್ ಹೋರಾಟಗಾರರು ಶಿವಾಜಿ ಮರಾಠರು ಎಂದು ಹೇಳ್ತಾರೆ: ವಾಗ್ಮಿ ಚೈತ್ರಾ ಕುಂದಾಪುರ

Pinterest LinkedIn Tumblr

ಕುಂದಾಪುರ: ಛತ್ರಪತಿ ಶಿವಾಜಿ ಮಹಾರಾಜರು 1665 ರ ಫೆ. 13 ಪೋರ್ಚುಗೀಸರ ವಿರುದ್ಧ ಪ್ರಥಮ ನೌಕ ಯಾನ ಕೈಗೊಂಡು, ಬಸ್ರೂರಲ್ಲಿ ವಿಜಯ ಪತಾಕೆ ಹಾರಿಸಿದ ದಿನವಾಗಿದ್ದು, ಅದರ ಸವಿನೆನಪಿಗಾಗಿ ಬಸ್ರೂರಿನ ಛತ್ರಪತಿ ಶಿವಾಜಿ ಅಭಿಮಾನಿ ಬಳಗದಿಂದ ‘ಬಸ್ರೂರು ಸ್ವಾತಂತ್ರ್ಯ ದಿನಾಚರಣೆ ಕಾರ್‍ಯಕ್ರಮ ಭಾನುವಾರ ಬಸ್ರೂರಿನ ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಭಾರತೀಯ ಸಂತಸಭಾದ ಸಂಘಟನಾ ಪ್ರಧಾನ ಕಾರ್‍ಯದರ್ಶಿ ಡಾ| ಸಂದೀಪ್ ರಾಜ್ ಮಹದೇವ ರಾವ್ ಮಹಿಂದ್ ಪುಣೆ ಮಾತನಾಡಿ, 357 ವರ್ಷಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಬಸ್ರೂರಿಗೆ ಮಾತ್ರ ಸ್ವಾತಂತ್ರ್ಯ ದೊರಕಿಸಿಕೊಟ್ಟಿಲ್ಲ. ಭಾರತದಿಂದ ಪೋರ್ಚುಗೀಸರು ತೊಲಗಲು ಅದೇ ದಿನ ಅಡಿಗಲ್ಲನ್ನು ಹಾಕಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾಪುರುಷ ಶಿವಾಜಿ. ಅಂತವರ ನೆನಪಿನಲ್ಲಿ ಬಸ್ರೂರಲ್ಲಿ ಕಳೆದ 9 ವರ್ಷಗಳಿಂದ ಇಲ್ಲಿ ಕಾರ್‍ಯಕ್ರಮ ನಡೆಯುತ್ತಿರುವುದು ಗಮನಾರ್ಹ ಸಂಗತಿ. ಇತಿಹಾಸದಲ್ಲಿ ಈ ಊರಿಗೆ ಹೆಚ್ಚು ಪ್ರಾಮುಖ್ಯತೆಯಿದೆ. ಎಂದವರು ಹೇಳಿದರು.

ಭಾರತೀಯ ಇತಿಹಾಸ ಸಂಕಲನ ಸಮಿತಿಯ ಮಹಿಳಾ ಪ್ರಮುಖ್ ಡಾ| ಸೀಮಾ ಉಪಾಧ್ಯಾಯ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಸೀಮಿತರಾದವರಲ್ಲ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು.

ವಾಗ್ಮಿ ಚೈತ್ರಾ ಕುಂದಾಪುರ ದಿಕ್ಸೂಚಿ ಭಾಷಣದಲ್ಲಿ, ಕೆಲ ತಗಡುಗಳು ಶಿವಾಜಿ ಮಹರಾಜರು ಮರಾಠರೆಂದು ಹೇಳುತ್ತಾರೆ. ಶಿವಾಜಿಯವರದ್ದು ಮೂಲ ಕನ್ನಡ ನೆಲ. ಅವರು ಹಿಂದೂ ಸಾಮ್ರಾಟ.ಶಾಲು ಹಾಕೋದೆ ಹೋರಾಟ ಎಂದುಕೊಂಡ ಸೋ ಕಾಲ್ಡ್ ಹೋರಾಟಗಾರರು, ಕೆಲ ರಾಜಕಾರಣಿಗಳು, ಪುಢಾರಿಗಳು ಇತಿಹಾಸ ತಿರುಚುತ್ತಾರೆ. ಶಿವಾಜಿಯವರು ಸ್ತ್ರೀಯರ ರಕ್ಷಣೆ, ಗೋ ರಕ್ಷಣೆಯನ್ನು ಮಾಡಿದವರು. ಅವರ ಪೂರ್ವಜರು ಕರ್ನಾಟಕದಲ್ಲಿ ನೆಲೆಸಿದ್ದವರು. ಅವರನ್ನು ಮರಾಠರು ಎಂದು ಬಿಂಬಿಸುತ್ತಿರುವುದು ಮೂರ್ಖತನ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಭಜರಂಗ ದಳ ತಾಲೂಕು ಸಂಚಾಲಕ ಸುಧೀರ್ ಮೇರ್ಡಿ, ಮತ್ತಿತರರು ಭಾಗವಹಿಸಿದ್ದರು.

ಸಭಾಕಾರ್‍ಯಕ್ರಮಕ್ಕೂ ಮುನ್ನ ಬಸ್ರೂರಿನ ಮಂಡಿಕೇರಿ ಹೊಳೆಬಾಗಿಲಿನಿಂದ ಶ್ರೀ ದೇವಿ ದೇವಸ್ಥಾನದವರೆಗೆ ಸಾಂಪ್ರದಾಯಿಕವಾಗಿ ಶೋಭಾಯಾತ್ರೆ ನಡೆಯಿತು. ಕಾರ್‍ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಉಮೇಶ್ ಆಚಾರ್ಯ ಬಸ್ರೂರು ಸ್ವಾಗತ, ಸಾರಿಕಾ ಕಾರ್‍ಯಕ್ರಮ ನಿರೂಪಿಸಿದುರ. ರಾಕೇಶ್ ಜಿ. ಕೆಳಮನೆ ವಂದಿಸಿದರು.

Comments are closed.