ಲಕ್ನೋ: ಭಾರತದಲ್ಲಿ ಮುಸ್ಲಿಂ ಮಹಿಳೆಯರ ಅಭಿವೃದ್ಧಿ ಮತ್ತು ಹಕ್ಕುಗಳನ್ನು ನಿರಾಕರಿಸಲು ಜನರು ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಶೋಷಣೆಗೊಳಪಡಿಸದಂತೆ ತಡೆಯಲು ಉತ್ತರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗುರುವಾರ ಉತ್ತರಪ್ರದೇಶದಲ್ಲಿ ಮೊದಲ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ತ್ರಿವಳಿ ತಲಾಖ್ ನಿಂದ ಮುಸ್ಲಿಂ ಮಹಿಳೆಯರನ್ನು ಮುಕ್ತಗೊಳಿಸಿದೆ. ಮುಸ್ಲಿಂ ಮಹಿಳೆಯರು ಬಿಜೆಪಿ ನೇತೃತ್ವದ ಮೋದಿ ಸರಕಾರವನ್ನು ಬಹಿರಂಗವಾಗಿ ಬೆಂಬಲಿಸತೊಡಗಿದಾಗ, ವಿಪಕ್ಷಗಳು ವ್ಯಾಕುಲಕ್ಕೊಳಗಾಗಿವೆ ಎಂದರು.
ಆದರೆ ನಾವು ಪ್ರತಿಯೊಬ್ಬ ಮುಸ್ಲಿಂ ಮಹಿಳೆಯರ ಪರವಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಕರ್ನಾಟಕದಲ್ಲಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ತರಗತಿಯೊಳಗೆ ಪ್ರವೇಶಿಸಲು ನಿರಾಕರಿಸಿದ ಘಟನೆ ವಿವಾದದ ಕಿಡಿಹೊತ್ತಿಸಿದ ಬೆನ್ನಲ್ಲೇ ಪ್ರಧಾನಿ ಪರೋಕ್ಷವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಉತ್ತರಪ್ರದೇಶದಲ್ಲಿನ ಹಿಂದಿನ ಸರಕಾರಗಳು ಜನರ ಅಭಿವೃದ್ಧಿ ಬಗ್ಗೆ ಲಕ್ಷ್ಯ ಕೊಟ್ಟಿರಲಿಲ್ಲ. ಅವರು ಜನರನ್ನು ನಿರ್ಲಕ್ಷಿಸಿರುವುದಾಗಿ ಉತ್ತರಪ್ರದೇಶದ ಸಹರಾನ್ ಪುರ್ ನಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಆರೋಪಿಸಿದರು.
ಒಂದು ವೇಳೆ ಕೋವಿಡ್ ಸಂದರ್ಭದಲ್ಲಿ ಅವರು ಅಧಿಕಾರದಲ್ಲಿ ಇದ್ದಿದ್ದರೆ, ಲಸಿಕೆಗಳನ್ನು ಬೇರೆ ಮಾರ್ಗದ ಮೂಲಕ ಮಾರಾಟ ಮಾಡಿ, ಅದು ನಿಮ್ಮ ಬಳಿ ತಲುಪದಂತೆ ಮಾಡುತ್ತಿದ್ದರು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಕೆಲವರು ನಿಮಗೆ ದೊಡ್ಡ ಭರವಸೆಗಳನ್ನು ನೀಡಬಹುದು, ನೆನಪಿಡಿ ಅದು ನಿಜಕ್ಕೂ ಸುಳ್ಳು ಭರವಸೆ. ಅದೊಂದು ಹೊಣೆಗೇಡಿತನದ ಭರವಸೆಯಾಗಿದೆ. ಹಿಂದಿನ ಸರಕಾರಗಳು ಉಚಿತ ವಿದ್ಯುತ್ ನೀಡುವ ಭರವಸೆ ನೀಡುತ್ತಾರೆ, ಆದರೆ ಉತ್ತರಪ್ರದೇಶವನ್ನು ಕತ್ತಲೆಯಲ್ಲಿಡುತ್ತಾರೆ ಎಂದು ಪರೋಕ್ಷವಾಗಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗೇಟು ನೀಡಿದರು.
Comments are closed.