ಕರಾವಳಿ

ಕುಂದಾಪುರ ಕೋಡಿಯಲ್ಲಿ 2 ತಿಂಗಳಲ್ಲಿ 5ನೇ ಬಾರಿ ಕಡಲಾಮೆ ಮೊಟ್ಟೆಗಳು ಪತ್ತೆ, ಹ್ಯಾಚರಿ ಮೂಲಕ ರಕ್ಷಣೆ

Pinterest LinkedIn Tumblr

ಕುಂದಾಪುರ: ಕಳೆದ ಇತ್ತೀಚಿನ ವರ್ಷಗಳಲ್ಲಿ ಕುಂದಾಪುರ ತಾಲೂಕಿನ ಕೋಡಿ ಆಸುಪಾಸಿನಲ್ಲಿ ಹಲವು ಬಾರಿ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ. ಕಳೆದ ವರ್ಷ ಹಲವು‌‌ ಬಾರಿ ಕಡಲಾಮೆ‌ ಮರಿಗಳು ಮೊಟ್ಟೆಯೊಡೆದು ಹೊರಬಂದು ಕಡಲು‌ ಸೇರಿದೆ. ಕಳೆದ ಎರಡು ದಿನದ ಹಿಂದೆ ಕೋಡಿ ಸೀತಾರಾಮ ಭಜನಾ ಮಂದಿರ ಬಳಿ ಹಾಗೂ ಭಾನುವಾರ ಕೋಡಿ ಲೈಟ್ ಹೌಸ್ ಬಳಿ ಕಡಲಾಮೆ ಮೊಟ್ಟೆ ಪತ್ತೆಯಾಗಿದ್ದು ಹ್ಯಾಚರಿ ಮೂಲಕ ರಕ್ಷಣೆ ಮಾಡಲಾಗಿದೆ.

ಕೋಡಿ ಲೈಟ್ ಹೌಸ್ ಬಳಿ, ಸೀತಾರಾಮ ಭಜನಾ ಮಂದಿರದ ಬಳಿ ಕಡಲಾಮೆ ಮೊಟ್ಟೆ ಸಿಕ್ಕಿರುವುದು ಎರಡು ತಿಂಗಳ ಅಂತರದಲ್ಲಿ ಐದನೇ ಬಾರಿಯಾಗಿದೆ. ಮೊದಲು ಪತ್ತೆಮಾಡಿದ ಮೀನುಗಾರ ಬಾಬು ಮೊಗವೀರ ಇಲ್ಲಿಯೂ ಕಡಲಾಮೆ ಮೊಟ್ಟೆ ಪತ್ತೆ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಆಮೆ ಮೊಟ್ಟೆ ಸಂರಕ್ಷಣೆ ಮಾಡುವಲ್ಲಿ ತೊಡಗಿಸಿಕೊಳ್ಳುವ ಎಸ್‌ಎಫ್‌ಎಲ್ ಸದಸ್ಯರು ಹಾಗೂ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಕೋಡಿ ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್ ರಂಜಿತ್, ಎಸ್‌ಎಫ್‌ಎಲ್ ಸಂಸ್ಥೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನವರು ಈ ಸಂದರ್ಭ ಇದ್ದರು.

ಹ್ಯಾಚರಿ ನಿರ್ಮಾಣ..ಎಚ್ಚರಿಕಾ ಬ್ಯಾನರ್ ಅಳವಡಿಕೆ
ಕಡಲಾಮೆ ಮೊಟ್ಟೆ ದೊರತ ಸ್ಥಳದ ಸುತ್ತಲೂ ಬಲೆ ಕಟ್ಟಿ ಹ್ಯಾಚರ್ ನಿರ್ಮಿಸಿ ನೈಸರ್ಗಿಕ ರೀತಿಯಲ್ಲಿಯೇ ರಕ್ಷಣೆ ಮಾಡಲಾಗಿದೆ. ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗದ ವತಿಯಿಂದ ‘ಕಡಲಾಮೆ ಮೊಟ್ಟೆ ರಕ್ಷಣಾ ಕೇಂದ್ರ’ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ಹಾಗೂ ಮಾಹಿತಿ ನೀಡುವ ಬ್ಯಾನರ್ ಅಳವಡಿಸಲಾಗಿದೆ. ‘ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಂತೆ ಪ್ರವರ್ಗ ಶೆಡ್ಯೂಲ್-2 1ರ ಅಡಿಯಲ್ಲಿ ಕಾಲಂ 51ರ ಪ್ರಕಾರ ಕಡಲಾಮೆ ಅಥವಾ ಅದರ ಮೊಟ್ಟೆಗಳಿಗೆ ಯಾವುದೇ ರೀತಿಯ ಹಾನಿ ಮಾಡಿದಲ್ಲಿ 3ರಿಂದ 7 ವರ್ಷಗಳ ಜೈಲುವಾಸ ಮತ್ತು 10/ಸಾವಿರ ದಂಡ ವಿಧಿಸಲಾಗುವುದು’ ಎಂದು ಕುಂದಾಪುರ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದೊಂದು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಕಡಲಾಮೆ‌ ಮೊಟ್ಟೆಗಳ ಪತ್ತೆ..
ಕಳೆದ ವರ್ಷ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಕೋಡಿ ಲೈಟ್ ಹೌಸ್ ಬಳಿ ಪ್ರತ್ಯೇಕವಾಗಿ ಹತ್ತಕ್ಕೂ‌ ಅಧಿಕ ಬಾರಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿತ್ತು. ಆ‌ ಮೊಟ್ಟೆಗಳನ್ನು ಹ್ಯಾಚರಿ ಮೂಲಕ ಸಂರಕ್ಷಿಸಲಾಗಿದ್ದಲ್ಲದೇ ಕಾದು ಕುಳಿತು ವೀಕ್ಷಣೆ ಜೊತೆ ರಕ್ಷಣೆ ಮಾಡಲು ಕ್ರಮವಹಿಸಲಾಗಿತ್ತು. ಮಾರ್ಚ್ ಹಾಗೂ ಎಪ್ರಿಲ್ ತಿಂಗಳಿನಲ್ಲಿ ಈ ಹ್ಯಾಚರಿಯಿಂದ ಕಡಲಾಮೆ‌ ಮರಿಗಳು ಹೊರಬಂದು ಸುರಕ್ಷಿತವಾಗಿ ಮತ್ತೆ ಕಡಲು ಸೇರುವ ತನಕ ಇಲಾಖೆ ಹಾಗೂ ಕಡಲಾಮೆ ಸಂರಕ್ಷಣಾ ಪ್ರಾಜೆಕ್ಟ್ ಸದಸ್ಯರು ಹಗಲು ರಾತ್ರಿಯೆನ್ನದೆ ಕಾರ್ಯನಿರ್ವಹಿಸಿದ್ದರು. 2021 ಡಿಸೆಂಬರ್ ತಿಂಗಳಿನಲ್ಲಿ ಕೋಡಿ ಲೈಟ್ ಹೌಸ್ ಸಮೀಪ, 2022 ಜನವರಿ ಮೊದಲ ವಾರದಲ್ಲಿ ಕೋಡಿ ಸರಕಾರಿ ಆಸ್ಪತ್ರೆ ಎದುರು ಸಮುದ್ರ ತಟದಲ್ಲಿ ಹಾಗೂ ಜ.29 ರಾಮಮಂದಿರ ಬಳಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದೆ. ನಿನ್ನೆ ಹಾಗೂ ಮೊನ್ನೆಯೂ ಸೇರಿದಂತೆ ಐದು ಹ್ಯಾಚರಿ ನಿರ್ಮಿಸಲಾಗಿದೆ.

Comments are closed.