ಕರಾವಳಿ

ಮಾನಂಜೆ ವ್ಯ.ಸೇ.ಸ. ಸಂಘದ ಸ್ಥಾಪಕರಾದ ದಿ. ಮಾನಂಜೆ ನಾರಾಯಣ ರಾವ್ ಸ್ಮಾರಕ ಶಿಲಾ ಪುತ್ಥಳಿ ಅನಾವರಣ

Pinterest LinkedIn Tumblr

ಕುಂದಾಪುರ: ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ವತಿಯಿಂದ ಸಂಸ್ಥೆಯ ಸ್ಥಾಪಕರಾದ ದಿ. ಮಾನಂಜೆ ನಾರಾಯಣ ರಾವ್ ಸ್ಮಾರಕ ಶಿಲಾ ಪುತ್ಥಳಿ ಅನಾವರಣ ಸಮಾರಂಭ ಮಂಗಳವಾರ ಮಾನಂಜೆ ವಿ.ಎಸ್.ಎಸ್. ಕೇಂದ್ರ ಕಚೇರಿಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪುತ್ಥಳಿ ಅನಾವರಣಗೊಳಿಸಿ‌ ಮಾತನಾಡಿ, ಯಾವುದೇ ಒಂದು ಸಂಸ್ಥೆ ಬೆಳೆಯುವಲ್ಲಿ ಅದರ ಸ್ಥಾಪಕರು ಮತ್ತು ಭದ್ರ ಬುನಾದಿ ಹಾಕಿದವರ ಶ್ರಮ ಇರುತ್ತದೆ. ಮಾನಂಜೆ ಸಹಕಾರಿ ಸಂಘ ಬಹಳ ದೊಡ್ಡ ಸದಸ್ಯರ ಸಂಖ್ಯೆ ಹೊಂದಿದ್ದು ಉತ್ತಮ ವ್ಯವಹಾರ ನಡೆಸುತ್ತಿದ್ದು ಅತ್ಯಂತ ಶ್ರೀಮಂತ ಮತ್ತು ಹೃದಯ ಶ್ರೀಮಂತಿಕೆ ಹೊಂದಿದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘವಾಗಿದೆ. ಸಂಸ್ಥೆಯ ಹಿಂದಿನ ಅಧ್ಯಕ್ಷರು ಹಾಕಿಕೊಟ್ಟ ದಾರಿಯಲ್ಲಿ ಇದೀಗಾ ಸಂಸ್ಥೆ ಉನ್ನತಿಯತ್ತ ಸಾಗುತ್ತಿದೆ. ಮಾನಂಜೆ ಸಂಘದ ಸ್ಥಾಪನೆ ಮಾಡಿ ಈ ಭಾಗದ ಜನರಿಗೆ ಸಹಕಾರ ನೀಡಿದ್ದರು. ನಾರಾಯಣ ರಾವ್ ಅವರ ಪುತ್ಥಳಿ ಸ್ಥಾಪಿಸುವ ಮೂಲಕ ನೆನಪನ್ನು ಚಿರಸ್ಥಾಯಿಗೊಳಿಸಿರುವುದು ಉತ್ತಮ ಕಾರ್ಯ ಎಂದರು.

ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ‌ ಮಾತನಾಡಿ, ಉತ್ತಮ ಕೆಲಸದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳನ್ನು ಸ್ಮರಿಸುವ ಮೂಲಕ ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ನೆನಪಿನಲ್ಲಿರಿಸಲು ಸಾಧ್ಯ. ಸಹಕಾರಿ ಸಂಘದ ಮೂಲಕ ಸ್ವಾವಂಲಭಿತನದ ಕಲ್ಪನೆಯೊಂದಿಗೆ ಮಾನಂಜೆ ಸಹಕಾರಿ ಸಂಘವನ್ನು ಹುಟ್ಟುಹಾಕಿದ ದಿ. ನಾರಾಯಣ ರಾವ್ ಅವರ ಪುತ್ಥಳಿ ನಿರ್ಮಾಣ ಮಾಡಲು ಸಂಸ್ಥೆಯ ಆಡಳಿತ ಮಂಡಳಿ ತೀರ್ಮಾನಿಸಿ ಆ ಕಾರ್ಯ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ಈ ಸಂಸ್ಥೆ ಜಿಲ್ಲೆಯಲ್ಲೇ ಯಶಸ್ವಿ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು ಈ ಭಾಗದ ಜನರಿಗೆ ದಾರಿ ದೀಪವಾಗಿದೆ ಎಂದರು.

ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಶಂಕರನಾರಾಯಣ ಯಡಿಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಸಹಕಾರಿ ಸಂಘದ ನಿಬಂಧಕರಾದ ಅರುಣ್ ಕುಮಾರ್, ಮಾನಂಜೆ ಸಹಕಾರಿ ಸಂಘದ ಉಪಾಧ್ಯಕ್ಷ ನಾಗಪ್ಪ ಪೂಜಾರಿ, ದಿ. ನಾರಾಯಣ ರಾವ್ ಅವರ ಪುತ್ರರಾದ ಎಂ. ರಾಘವೇಂದ್ರ ರಾವ್, ಜಯಚಂದ್ರ ರಾವ್ ಮೊದಲಾದವರು ಇದ್ದರು.

ಮಾನಂಜೆ ವ್ಯ.ಸೇ.ಸ. ಸಂಘದ ಮಾನಂಜೆ‌ ಶಾಖೆ ಜನರಲ್ ಮ್ಯಾನೇಜರ್ ಎನ್.‌ ಶ್ರೀನಿವಾಸ್ ಸ್ವಾಗತಿಸಿದರು. ನಿರ್ದೆಶಕರುಗಳು ಉಪಸ್ಥಿತರಿದ್ದರು.

Comments are closed.