ಕರಾವಳಿ

ಮೊಬೈಲ್ ಆಪ್’ನಲ್ಲಿ‌ ಪಡೆದ ಸಾಲ ತೀರಿಸಲಾಗದೇ ಡೆತ್ ನೋಟ್ ಬರೆದು ನೇಣಿಗೆ ಕೊರಳೊಡ್ಡಿದ 25 ವರ್ಷದ ಯುವಕ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಮೊಬೈಲ್ ಆಪ್’ನಲ್ಲಿ‌ ಮಾಡಿಕೊಂಡ ಸಾಲ ತೀರಿಸಲಾಗದೆ ಭಾವನಾತ್ಮಕವಾಗಿ ಡೆತ್ ನೋಟ್ ಬರೆದಿಟ್ಟು ಎಮ್.ಎನ್.ಸಿ ಕಂಪೆನಿ ಉದ್ಯೋಗಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಹರೆಗೋಡುವಿನಲ್ಲಿ ನಡೆದಿದೆ.

ಹೆಮ್ಮಾಡಿಯ ಹರೆಗೋಡು ಕೊಳಹಿತ್ಲು ನಿವಾಸಿ ಸಂಜೀವ ದೇವಾಡಿಗ ಹಾಗೂ ಕನಕ ಎಂಬವರ ಪುತ್ರ ವಿಘ್ನೇಶ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ.

ನಡೆದಿದ್ದೇನು..?
ಬುಧವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದ ವಿಘ್ನೇಶ್ ನಸುಕಿನ ಜಾವ ಐದು ಗಂಟೆಯ ಸುಮಾರಿಗೆ ಮನೆ ಎದುರಿನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಘ್ನೇಷ್ ತಾಯಿ ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಬಾಗಿಲು ತೆರೆದಿತ್ತು. ಅನುಮಾನಗೊಂಡು ಹೊರಗಡೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸಾಧಿಸುವ ಕನಸ್ಸು ಕಂಡಿದ್ದ ವಿಘ್ನೇಶ್…
ಸಂಜೀವ ಹಾಗೂ ಕನಕ ದಂಪತಿಗಳ ನಾಲ್ವರು ಮಕ್ಕಳಲ್ಲಿ ಎರಡನೇ ಪುತ್ರನಾದ ವಿಘ್ನೇಶ್ ಬೆಂಗಳೂರಿನ ಎಮ್.ಎನ್.ಸಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೊದಲ‌ ಲಾಕ್ ಡೌನ್ ಸಮಯದಲ್ಲಿ ಊರಿಗೆ ಮರಳಿದ್ದರು. ಬಳಿಕ ವರ್ಕ್ ಫ್ರಮ್ ಹೋಮ್ ಇದ್ದುದರಿಂದ ಮನೆಯಲ್ಲೇ ಕೆಲಸ ಮಾಡುತ್ತಿದ್ದು, ಅದರ ಜೊತೆಜೊತೆಗೆ ಕಳೆದ ಒಂದು ವರ್ಷಗಳ ಹಿಂದೆ ಸ್ನೇಹಿತರೊಡಗೂಡಿ ಬ್ರಹ್ಮಾವರ ಸಮೀಪ ಚಪ್ಪಲಿ ಹೋಲ್ ಸೆಲ್ ಶೋರೂಂ ಒಂದನ್ನು ಆರಂಭಿಸಿದ್ದರು. ಈ ಸಮಯದಲ್ಲಿ ಉದ್ಯಮಕ್ಕೆ ಬಂಡವಾಳ ಹಾಕುವ ಉದ್ದೇಶದಿಂದ ಮೊಬೈಲ್ ಆಪ್‌ ಮೂಲಕ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಲಾಕ್ ಡೌನ್ ಕಾರಣದಿಂದಾಗಿ ಆರಂಭಿಸಿದ ವ್ಯವಹಾರ ಕೈಹಿಡಿಯದೇ ಇದ್ದುದರಿಂದ ವಿಘ್ನೇಶ್ ಆಪ್ ಮೂಲಕ ಪಡೆದುಕೊಂಡ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೊಬೈಲ್ ಆಪ್ ಮೂಲಕ ಸಾಲ ಕೊಟ್ಟವರು ಕಿರುಕುಳ ನೀಡಿದ್ದರಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಘ್ನೇಶ್ ಕಾಲೇಜು ದಿನಗಳಿಂದಲೂ ಶ್ರಮಜೀವಿಯಾಗಿದ್ದರು. ಕಾಲೇಜು ರಜಾ ಸಮಯದಲ್ಲಿ ಕೆಲಸಕ್ಕೆ ಹೋಗಿ ಮನೆಯವರಿಗೆ ನೆರವಾಗುತ್ತಿದ್ದರು. ಕೆಲಸದ ಜೊತೆಗೂ ಉದ್ಯಮ‌ ಆರಂಭಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಕಂಡಿದ್ದರು ಎಂದು ಆಪ್ತ ವರ್ಗದವರು ತಿಳಿಸಿದ್ದಾರೆ.

ಲೋನ್ ಕಟ್ಟಲು ಯಾರಾದರೂ ಕಾಲ್ ಮಾಡಿದರೆ ಸತ್ತು ಹೋದ ಅನ್ನಿ..
ಆತ್ಮಹತ್ಯೆ‌ ನಿರ್ಧಾರಕ್ಕೆ ಬಂದ ವಿಘ್ನೇಶ್ ಡೆತ್ ನೋಟ್ ಬರೆದಿದ್ದು ಅದರ ಸಾರಾಂಶ ಮನಕಲುಕುವಂತಿದೆ. “ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡಿರುವ ಸಾಲ. ಮೊಬೈಲ್ ಯಾಪ್‌ನಲ್ಲಿ ಮಾಡಿಕೊಂಡ ಸಾಲ ನನಗೆ ತೀರಿಸಲು ಆಗುತ್ತಿಲ್ಲ. ಆದ್ದರಿಂದ ನಾನು ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ನನ್ನ‌ ಸಾಲ ಇದೆ ಕಟ್ಟಿ ಎಂದು ಯಾರಾದರೂ ಕರೆ ಮಾಡಿದರೆ ಅವನು‌ ನಮಗೆ ಗೊತ್ತಿಲ್ಲ ಅಥವಾ ಸತ್ತು ಹೋದ ಎಂದು ಹೇಳಿ ಬಿಡಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ಕ್ಷಮಿಸಿ ಬಿಡಿ. ಕೆಳಗಡೆ ಆಫೀಸ್ ಕೆಲಸ ಮಾಡುವವನ‌ ನಂಬರ್ ಇದೆ. ಕಾಲ್‌ ಮಾಡಿ ತಿಳಿಸಿ ಬಿಡಿ. ಶುಕ್ರವಾರ ಸಂಬಳ ಬರುತ್ತದೆ ಎಂದು ಬರೆದಿದ್ದಾರೆ. ಅಲ್ಲದೆ ಡೆತ್ ನೋಟ್ ಕೆಳಭಾಗದಲ್ಲಿ ಎಟಿಎಂ ಪಾಸ್ ವರ್ಡ್ ಕೂಡ ಬರೆದಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Comments are closed.