(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಹಿಂಸಾತ್ಮಕವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಜಾನುವಾರುಗಳನ್ನು ಬೈಂದೂರು ಪೊಲೀಸರು ರಕ್ಷಣೆ ಮಾಡಿದ್ದು ಪರಾರಿಯಾದ ಆರೋಪಿಗಳ ಪತ್ತೆಗೆ ಕ್ರಮವಹಿಸಿದ್ದಾರೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಪಿಎಸ್ಐ ಪವನ್ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಡಿ. 21ರಂದು ಈ ಘಟನೆ ನಡೆದಿತ್ತು. ಮಾರುತಿ ಸುಜುಕಿ ರಿಡ್ಜ್ ವಾಹನದಲ್ಲಿ ಕವುಗೈದ ಜಾನುವಾರುಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಕಿರಿಮಂಜೇಶ್ವರ ಕಡೆಯಿಂದ ಬೈಂದೂರು ಕಡೆಗೆ ಆರೋಪಿಗಳು ಬರುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಯಡ್ತರೆ ಜಂಕ್ಷನ್ ಬಳಿ ಅಂದು ಮುಂಜಾನೆ ನಾಕಾಬಂದಿ ಹಾಕಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ವೇಗವಾಗಿ ಬಂದ ಕಾರನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದಾಗ ಚಾಲಕ ಕಾರನ್ನು ಯಡ್ತರೆ ಜಂಕ್ಷನ್ ಬಳಿ ನಿಲ್ಲಿಸಿದ್ದು ಕಾರಿನಲ್ಲಿದ್ದವರು ಕತ್ತಲೆಯಲ್ಲಿ ಪರಾರಿಯಾಗಿದ್ದರು.

ನಂಬರ್ ಪ್ಲೇಟ್ ಅಸ್ತವ್ಯಸ್ತ….
ಕಾರನ್ನು ಪರಿಶೀಲಿಸಿದಾಗ ಕಾರಿಗೆ ಹಿಂಬದಿಯ ನಂಬರ್ ಪ್ಲೇಟ್ ಅಳವಡಿಸಿರಲಿಲ್ಲ. ಹಾಗೆಯೇ ಮುಂದಿನ ನಂಬರ್ ಪ್ಲೇಟನ್ನು ಉಜ್ಜಿ ನಂಬರ್ ಕಾಣದಂತೆ ಮಾಡಲಾಗಿತ್ತು. ಕಾರಿನ ನಂಬರ್ ಪ್ಲೇಟ್ ನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ KA-47-M-4170 ನೋಂದಣಿ ಸಂಖ್ಯೆ ಕಂಡುಬಂದಿತ್ತು. ಕಾರಿನ ಬಾಗಿಲನ್ನು ತೆರೆದು ಪರಿಶೀಲಿಸಿದಾಗ ಹಿಂಬದಿಯಲ್ಲಿ ಕುಳಿತುಕೊಳ್ಳುವ ಸೀಟ್ ತೆರವು ಮಾಡಿದ ಸ್ಥಳದಲ್ಲಿ 2 ಜಾನುವಾರುಗಳ ಕಾಲುಗಳನ್ನು ಕಟ್ಟಿ ಒಂದರ ಮೇಲೆ ಒಂದು ಹಿಂಸಾತ್ಮಕವಾಗಿ ತುಂಬಿಸಲಾಗಿತ್ತು. ಪೊಲೀಸರು ಜಾನುವಾರುಗಳನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.