ಕರಾವಳಿ

ಉದ್ಯಮಿ ಭಾಸ್ಕರ ಶೆಟ್ಟಿ ಮರ್ಡರ್ ಕೇಸ್: ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಹೈಕೋರ್ಟ್’ನಿಂದ ಜಾಮೀನು

Pinterest LinkedIn Tumblr

ಬೆಂಗಳೂರು: ಉಡುಪಿಯ ಬಹು‌ಕೋಟಿ ಉದ್ಯಮಿ ಭಾಸ್ಕರ ಶೆಟ್ಟಿಯವರನ್ನು ಕೊಲೆ ಮಾಡಿ‌ ಹೋಮ ಕುಂಡದಲ್ಲಿ ಹಾಕಿ ಸುಟ್ಟ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಉಡುಪಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕಳೆದ ಜೂನ್ ನಲ್ಲಿ ಉಡುಪಿ ನ್ಯಾಯಾಲಯವು ಮೂವರು ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಗೆಳೆಯ ಹಾಗೂ ಅರ್ಚಕ ನಿರಂಜನ್ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆ ಪ್ರಶ್ನಿಸಿ ರಾಜೇಶ್ವರಿ ಶೆಟ್ಟಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.

2016ರ ಜುಲೈ 28ರಂದು ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ್​ ಶೆಟ್ಟಿ ಅವರನ್ನು ಉಡುಪಿಯ ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಅವರ ಹೆಂಡತಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್ ಶೆಟ್ಟಿ ಸೇರಿ ಕೊಲೆ ಮಾಡಿದ್ದರು. ಬಳಿಕ ರಾಜೇಶ್ವರಿ ತನ್ನ ಗೆಳೆಯನಾಗಿದ್ದ ಅರ್ಚಕ ನಿರಂಜನ್ ಭಟ್ ಸಹಾಯದಿಂದ ಆ ಶವ ಸಿಗದಂತೆ ಮಾಡಲು ಸ್ಕೆಚ್ ಹಾಕಿದ್ದರು. ಅಂತೆಯೇ ಮೂವರು ನಿರಂಜನ್ ಭಟ್ ಮನೆಯಲ್ಲಿ ಹೋಮಕುಂಡ ಸಿದ್ಧ ಮಾಡಿ, ಭಾಸ್ಕರ್ ಶೆಟ್ಟಿ ಶವವನ್ನು ಹೋಮಕುಂಡಕ್ಕೆ ಹಾಕಿ ಸುಟ್ಟುಹಾಕಿದ್ದರು.

ಜುಲೈ 31ರಂದು ಭಾಸ್ಕರ್ ಶೆಟ್ಟಿ ಅವರ ತಾಯಿ ತಮ್ಮ ಮಗ ನಾಪತ್ತೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ, ಅರ್ಚಕ ನಿರಂಜನ್ ಭಟ್, ಆತನ ತಂದೆ ಶ್ರೀನಿವಾಸ್ ಭಟ್, ಮತ್ತು ಕಾರು ಚಾಲಕ ರಾಘವೇಂದ್ರನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ್ದ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯವು ರಾಜೇಶ್ವರಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಐದನೇ ಆರೋಪಿ ಚಾಲಕ ರಾಘವೇಂದ್ರನನ್ನು ಖುಲಾಸೆಗೊಳಿಸಲಾಗಿದೆ. ನಾಲ್ಕನೇ ಆರೋಪಿ ಶ್ರೀನಿವಾಸ ಭಟ್ ಅನಾರೋಗ್ಯದಿಂದ ಮೃತಪಟ್ಟಿದ್ದರು.

Comments are closed.