ಆರೋಗ್ಯ

ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ; ಶಾಲೆ, ಕಾಲೇಜುಗಳ ಮೇಲೆ ಹೆಚ್ಚು ನಿಗಾ- ಸಿಎಂ ಬೊಮ್ಮಾಯಿ

Pinterest LinkedIn Tumblr

ದಾವಣಗೆರೆ: ಸರ್ಕಾರದ ಮುಂದೆ ಲಾಕ್ ಡೌನ್ ಪ್ರಸ್ತಾವನೆ ಇಲ್ಲ, ಲಾಕ್ಡೌನ್ ಮಾಡುವ ಪ್ರಶ್ನೆಯೂ ಇಲ್ಲ. ಶಾಲೆ, ಕಾಲೇಜುಗಳ ಮೇಲೆ ನಿಗಾ ಇಡಲು ಸೂಚಿಸಿದ್ದೇವೆ ಹೊರತು ಅವುಗಳನ್ನು ಮುಚ್ಚಲು ತಿಳಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ರೂಪಾಂತರಿ ವೈರಸ್ ಒಮಿಕ್ರಾನ್ ಕುರಿತು ಜನತೆ ಭಯಪಡುವ ಅಗತ್ಯವಿಲ್ಲ. ಆದರೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ರೂಪಾಂತರಿ ವೈರಸ್ ಕಂಡುಬಂದಿರುವ ದೇಶಗಳಿಂದ ಬಂದಿರುವವರ ಮೇಲೆ ನಿಗಾ ಇರಿಸಿದ್ದು, ಅವರ ಸಂಪರ್ಕಿತರ ಪತ್ತೆ ಹಚ್ಚಿ ಪರೀಕ್ಷಿಸಲಾಗುತ್ತಿದೆ. ಇದಲ್ಲದೆ ವಿಮಾನ ನಿಲ್ದಾಣದಲ್ಲಿಯೂ ಕಟ್ಟುನಿಟ್ಟಿನ ಪರೀಕ್ಷೆ ಮಾಡುತ್ತಿದ್ದು, ನೆಗಟಿವ್ ಇದ್ದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಕೇರಳದಿಂದ ಆಗಮಿಸಿರುವ ವಿದ್ಯಾರ್ಥಿಗಳು ಆಗಮಿಸುವವರಿಗೆ ನೆಗೆಟಿವ್ ವರದಿ ಕಡ್ಡಾಯ ಹಾಗೂ 7ನೇ ದಿನಕ್ಕೆ ಮತ್ತೊಮ್ಮೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಜನರು ಹೆಚ್ಚಾಗಿ ಗುಂಪು ಸೇರುವುದನ್ನು ತಡೆಯಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ಸರ್ಕಾರ ನಿರಂತರವಾಗಿ ತಜ್ಞರು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಕಾಲಕಾಲಕ್ಕೆ ಅವರು ನೀಡುವ ನಿರ್ದೇಶನದಂತೆ ಕ್ರಮ ವಹಿಸಲಾಗುವುದು, ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಗೆ ವಿಭಿನ್ನ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಐ.ಸಿ.ಎಂ.ಆರ್ ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಯಾವ ತಳಿ ಎಂದು ತಿಳಿಯಲಿದೆ ಎಂದರು.

ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಬೇಕು. ಈ ಬಗ್ಗೆ ನಾವು ನಿರ್ಧಾರ‌ ಕೈಗೊಳ್ಳಲು ಆಗಲ್ಲ. ಶಾಲಾ-ಕಾಲೇಜುಗಳಲ್ಲಿ ಕೊವಿಡ್ ಬಗ್ಗೆ ನಿಗಾ ಇರಿಸಲು ಸೂಚಿಸಿದ್ದೇವೆ. ಶಾಲಾ- ಕಾಲೇಜುಗಳಿಗೆ ರಜೆ ನೀಡುವ ಅಗತ್ಯವೇ ಇಲ್ಲ , ನಮ್ಮ ಕಾಳಜಿ ಆರೋಗ್ಯ ಕಾರ್ಯಕರ್ತರದ್ದು. ಈಗಾಗಲೇ ಅವರು ಎರಡು ಡೋಸ್ ಪಡೆದು 6 ತಿಂಗಳ ಮೇಲಾಗಿದೆ ಎಂದರು.

Comments are closed.