ಉಡುಪಿ: ಅನ್ನಭಾಗ್ಯದ ಅಕ್ಕಿಯನ್ನು ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಉಪ್ಪುಂದ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಭಾಗ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಳಿ ಬಂಧಿಸಲಾಗಿದೆ.
(ಸಾಂದರ್ಭಿಕ ಚಿತ್ರ)
ಭಟ್ಕಳ ಸರ್ಪನಕಟ್ಟೆಯ ಹಸನ್ ಬ್ಯಾರಿ (33), ರಫಿಕ್(33), ಭಟ್ಕಳ ಗಣೇಶ್ ನಗರದ ಇಬ್ರಾಹಿಂ ಬ್ಯಾರಿ(36) ಬಂಧಿತ ಆರೋಪಿಗಳು. ಇವರು ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿ ಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಬೈಂದೂರು ಆಹಾರ ನಿರೀಕ್ಷಕ ವಿನಯ ಕುಮಾರ್ ಅವರು ಬೈಂದೂರು ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ವಾಹನದಲ್ಲಿದ್ದ ಬೆಳ್ತಿಗೆ ಅಕ್ಕಿ ತುಂಬಿರುವ 23 ಚೀಲ(685.300 ಕೆಜಿ), ಕುಚ್ಚಲಕ್ಕಿ ತುಂಬಿರುವ 18 ಚೀಲ ಗಳು(534.100ಕೆ.ಜಿ.) ಸೇರಿದಂತೆ ಒಟ್ಟು 29,265ರೂ. ವೌಲ್ಯದ 41 ಚೀಲ ಅಕ್ಕಿ(ಒಟ್ಟು 1219.400 ಕೆಜಿ), ವಾಹನ, ಹಾಗೂ ಬ್ಯಾಟರಿ ಚಾಲಿತ ಹ್ಯಾಂಡ್ ವೇಯಿಂಗ್ ಮೆಷಿನನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.