ಪ್ರಮುಖ ವರದಿಗಳು

ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಆರೋಪ: 28 ದಿನಗಳ ಬಳಿಕ ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆ

Pinterest LinkedIn Tumblr

ಮುಂಬೈ: ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಡ್ರಗ್ಸ್ ಪತ್ತೆಯಾದ ಹಿನ್ನೆಲೆ ಎನ್.ಸಿ.ಬಿ ಅಧಿಕಾರಿಗಳಿಂದ ಕಳೆದ ಅಕ್ಟೋಬರ್ 2ರಂದು ಬಂಧನಕ್ಕೊಳಗಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ 28 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.

ಇಂದು ಮುಂಬೈಯ ಅರ್ಥೂರ್ ರೋಡ್ ಜೈಲಿನಿಂದ ಆರ್ಯನ್ ಖಾನ್ ನನ್ನು ಅಧಿಕಾರಿಗಳು ಬಿಡುಗಡೆ ಪತ್ರಗಳನ್ನು ಪಡೆದು ಬಿಡುಗಡೆ ಮಾಡಿದ್ದಾರೆ. ಇಂದು ನಸುಕಿನ ಜಾವ 5.30ರ ಸುಮಾರಿಗೆ ಜೈಲಿನ ಅಧಿಕಾರಿಗಳು ಜೈಲಿನ ಹೊರಗೆ ಜಾಮೀನು ಪಡೆಯುವ ಪತ್ರಗಳನ್ನು ಹಾಕಿದ ಬಾಕ್ಸ್ ಗಳನ್ನು ತೆರೆದು ಕೆಲವು ಹೊತ್ತಿನಲ್ಲಿ ಬಿಡುಗಡೆಯ ವಿಧಾನಗಳನ್ನು ಪಾಲಿಸಿದರು.

ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳಿಂದ ಬಂಧನಕ್ಕೊಳಗಾದ ನಂತರ ಅಕ್ಟೋಬರ್ 8ರಂದು ಆರ್ಯನ್ ಖಾನ್ ನನ್ನು ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ತಕ್ಷಣ ಹೊರಗೆ ತಮಗಾಗಿ ಕಾಯುತ್ತಿದ್ದ ಕಾರು ಹತ್ತಿ ಮುಂಬೈ ಉಪ ನಗರ ಬಂದ್ರಾದಲ್ಲಿರುವ ಮನ್ನತ್ ಗೆ ತೆರಳಿದರು. ಶಾರೂಕ್ ಖಾನ್ ನಿವಾಸ ಮನ್ನತ್ ನ ಹೊರಗೆ ಅಭಿಮಾನಿಗಳು ಜಮಾಯಿಸಿ ಆರ್ಯನ್ ಖಾನ್ ನನ್ನು ಸ್ವಾಗತಿಸಿದರು.

ಆರ್ಯನ್ ಖಾನ್ ಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿದೆ. ಐದು ಪುಟಗಳ ಆದೇಶದಲ್ಲಿ ಬಾಂಬೆ ಹೈಕೋರ್ಟ್, ಆರ್ಯನ್ ಖಾನ್ ಮತ್ತು ಇತರ ಇಬ್ಬರು ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚ ಅವರನ್ನು 1 ಲಕ್ಷ ರೂಪಾಯಿ ವೈಯಕ್ತಿಕ ಶ್ಯೂರಿಟಿ ಬಾಂಡ್’ಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

ಹೈಕೋರ್ಟ್ ನಿಗದಿಪಡಿಸಿದ ಷರತ್ತುಗಳ ಪ್ರಕಾರ, ಮೂವರು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು ಮತ್ತು ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆಯದೆ ಭಾರತವನ್ನು ತೊರೆಯಬಾರದು. ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು ಎಂಬ ನಿಯಮವನ್ನು ಹೇರಲಾಗಿದೆ.

Comments are closed.