ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಲವಾರು ಭಾಗಗಳಲ್ಲಿ ವಾಹನ ಮೇಲ್ಸೇತುವೆ (ವೆಹಿಕಲ್ ಓವರ್ ಪಾಸ್) ನಿರ್ಮಾಣ ಮಾಡುವ ಅಗತ್ಯತೆ ಇದ್ದು, ಈ ಕುರಿತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಭೇಟಿ ಮಾಡಿ ಮನವರಿಕೆ ಮಾಡಿದ್ದರು.

ಕ್ಷೇತ್ರದ ಜನರ ಅಪೇಕ್ಷೆಯ ಮೇರೆಗೆ ಮಾಡಿದ ಮನವಿಯನ್ನು ಪುರಸ್ಕರಿಸಿ ಕೇಂದ್ರ ಭೂ ಸಾರಿಗೆ ಸಚಿವರು ಉಡುಪಿ ಜಿಲ್ಲೆಯ 2 ಪ್ರದೇಶಗಳಲ್ಲಿ 50 ಕೋಟಿಗಳ ವೆಚ್ಚದಲ್ಲಿ ವಾಹನ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದ್ದಾರೆ.
ಉಡುಪಿ ವಿಧಾನ ಸಭಾ ಕ್ಷೇತ್ರದ ಅಂಬಲಪಾಡಿಯಲ್ಲಿ 24.56 ಕೋಟಿ, ಸಂತೆಕಟ್ಟೆಯಲ್ಲಿ 24.47 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ.
ಈ ಮೇಲಿನ ಪ್ರದೇಶಗಳು ಕೂಡು ರಸ್ತೆಯನ್ನು ಹೊಂದಿದ್ದು ವಾಹನ ಸಂಚಾರವೂ ಹೆಚ್ಚಾಗಿದ್ದು ಬ್ಲಾಕ್ ಸ್ಪಾಟ್ ಝೋನ್ ಎಂದು ಗುರುತಿಸಲಾಗಿತ್ತು. ವಾಹನ ಸಂಚಾರಕ್ಕೆ ಹಾಗೂ ಪ್ರಯಾಣಿಕರಿಗೆ ಸಹಾಯಕವಾಗುವಂತೆ ವಾಹನ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿರುತ್ತದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರಕ್ಕೆ, ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.
Comments are closed.