ಬೆಂಗಳೂರು: ದಸರಾ ರಜೆ ಬಳಿಕ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೂ ಭೌತಿಕ ತರಗತಿ ಆರಂಭದೊಂದಿಗೆ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಿಗಲಿದೆ.

ಅ. 10ರಿಂದ ಅ. 20ರ ವರೆಗೆ ದಸರಾ ರಜೆ ಇರಲಿದೆ. ಈಗಾಗಲೇ ಸರಕಾರ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಿದೆ. ಆದರೆ ಈವರೆಗೆ ಬಿಸಿಯೂಟ ಆರಂಭಿಸಿಲ್ಲ. ದಸರಾ ರಜೆ ಮುಗಿಯುತ್ತಿದ್ದಂತೆ 1ರಿಂದ 5ನೇ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಯ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಬಿಸಿಯೂಟ ನೀಡಲಾಗುತ್ತದೆ.
ಕೊರೋನಾ ಹಿನ್ನೆಲೆ ಈಗಾಗಲೇ ನೀಡಿರುವ ಎಸ್‌ಒಪಿಯನ್ನು ಪಾಲಿಸಿ ಬಿಸಿಯೂಟ ನೀಡಬೇಕಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಿಕೊಳ್ಳಬೇಕು. ಬಿಸಿಯೂಟ ಸಿದ್ಧ ಪಡಿಸುವ ಕೊಠಡಿಯ ಸ್ವಚ್ಛತೆ, ಬಿಸಿಯೂಟ ವಿತರಣೆಗೆ ಬೇಕಾದ ವ್ಯವಸ್ಥೆ ಸಹಿತ ಎಲ್ಲವನ್ನೂ ಸಮರ್ಪಕವಾಗಿ ಸಿದ್ಧಪಡಿಸಿಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದರು.
ತರಗತಿ ಆರಂಭದ ಜತೆಗೆ ಬಿಸಿಯೂಟ ಒದಗಿಸುವಂತೆ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
Comments are closed.