ಮಂಗಳೂರು: ಭಾರೀ ಸುದ್ದಿಯಲ್ಲಿದ್ದ ಕಡಬ ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ಥೆಯ ತಂದೆ ನೀಡಿದ ದೂರಿನ ಹಿನ್ನೆಲೆ ಕಡಬ ಪೊಲೀಸ್ ಠಾಣೆ ಸಿಬ್ಬಂದಿ ಶಿವರಾಜ್ ವಿರುದ್ಧ ಕಡಬ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆಯಂತೆ ಸೋಮವಾರ ರಾತ್ರಿ ಪ್ರಕರಣ ದಾಖಲಾಗಿದೆ.

ಶಿವರಾಜ್ ಈ ಹಿಂದೆ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯನ್ನು ತನ್ನ ಕರ್ತವ್ಯದ ಪ್ರಭಾವ ಬಳಸಿದ್ದಲ್ಲದೆ ಮದುವೆಯ ಆಮಿಷವೊಡ್ಡಿ ಅತ್ಯಾಚಾರ ಎಸಗಿ ಆಕೆ ಗರ್ಭವತಿಯಾಗಲು ಕಾರಣಕರ್ತನಾಗಿದ್ದ. ಹಾಗೆಯೇ ಆಕೆಗೆ ಅಬಾರ್ಷನ್ ಮಾಡಿಸಿರುವ ಬಗ್ಗೆ ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಡುತ್ತಿತ್ತು.
ಇದರ ಬೆನ್ನಲ್ಲೇ ಯುವತಿ ತಂದೆ ಕಡಬ ಠಾಣೆಗೆ ದೂರು ನೀಡಿ ಶಿವರಾಜ್‌ನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದರು.
ಘಟನೆ ಹಿನ್ನೆಲೆ…
‘ಈ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿದ್ದ ನನ್ನ ಮಗಳು ಅಪ್ರಾಪ್ತೆಯಾಗಿದ್ದು, ಆಕೆಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡ ಶಿವರಾಜ್ ಅತ್ಯಚಾರ ಎಸಗಿದ್ದಾನೆ. ಬಳಿಕ ಗರ್ಭಪಾತ ನಡೆಸುವ ಸಲುವಾಗಿ ಯುವತಿಯನ್ನು ಮಂಗಳೂರಿನಲ್ಲಿ ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದರು.
ಗರ್ಭಪಾತ ನಡೆಸಲು ಶಿವರಾಜನೇ ಹಣ ನೀಡಿದ್ದಾನೆ ಎಂದು ಯುವತಿಯ ತಂದೆ ನೀಡಿದ ದೂರಿನಲ್ಲಿ ಅಪಾದಿಸಿದ್ದಾರೆ. ನಾನು ಮತ್ತು ನನ್ನ ಪತ್ನಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ನನ್ನ ಮಗಳು ಅತ್ಯಾಚಾರಕ್ಕೊಳಗಾಗಿ ಆರು ತಿಂಗಳ ಹಿಂದೆ ಪ್ರಕರಣ ಮುಗಿದಿದೆ. ಆದರೂ ಪೊಲೀಸ್ ಶಿವರಾಜ್ ಇಲ್ಲ ಸಲ್ಲದ ಕಾರಣಗಳನ್ನು ಹೇಳಿಕೊಂಡು ನಮ್ಮ ಮನೆಗೆ ಆಗಾಗ ಬರುತ್ತಿದ್ದ. ನನ್ನ ಮಗಳ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದು ನನ್ನ ಗಮನಕ್ಕೆ ಬಂದಿತ್ತು. ಆದರೆ ಆತನ ಕೆಟ್ಟ ಚಾಳಿ ನನ್ನ ಅರಿವಿಗೆ ಬಂದಿರಲಿಲ್ಲ. ಇತ್ತೀಚೆಗೆ ಮಗಳ ದೈಹಿಕ ಬೆಳವಣಿಗೆಯಲ್ಲಿ ಬದಲಾವಣೆಗಳಾಗಿ ಗರ್ಭಿಣಿಯಾಗಿರುವುದು ಕಂಡು ಬಂದು ಪ್ರಶ್ನಿಸಿದಾಗ ಶಿವರಾಜ್‌ನಿಂದಾಗಿ ನಾನು ಗರ್ಭವತಿಯಾಗಿರುವುದನ್ನು ಮಗಳು ಒಪ್ಪಿಕೊಂಡಿದ್ದಳು. ಈ ಬಗ್ಗೆ ಶಿವರಾಜ್‌ನನ್ನು ವಿಚಾರಿಸಿದಾಗ ತಾನು ಯುವತಿಯನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಇತ್ತೀಚೆಗೆ ನಾನು ಮದುವೆಯಾಗುವುದಿಲ್ಲ, ಗರ್ಭಪಾತ ಮಾಡಿಸುತ್ತೇನೆ, ಅದಕ್ಕೆ ನಾನೇ ಖರ್ಚು ಭರಿಸುತ್ತೇನೆ ಎಂದು ಹೇಳಿದ್ದಾನೆ. ಹಾಗೆ ಮಾಡಬೇಡ ನನ್ನ ಮಗಳನ್ನು ಮದುವೆಯಾಗು ಎಂದು ಹೇಳಿದಾಗ ಅದಕ್ಕೆ ಆತ ಒಪ್ಪಿರಲಿಲ್ಲ. ಆಗ ನಾನು ಆಘಾತಕ್ಕೆ ಒಳಗಾಗಿದ್ದೆ ಎಂದು ಸಂತ್ರಸ್ತ ಯುವತಿಯ ತಂದೆ ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಳಿಕ ನಡೆದ ಬೆಳವಣಿಗೆಯಲ್ಲಿ 18-09-21ರಂದು ನನ್ನ ಪತ್ನಿ ಹಾಗೂ ಮಗಳು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಂದಿಲ್ಲ. ಪತ್ನಿ ನನಗೆ ದೂರವಾಣಿ ಮೂಲಕ ಮಾತನಾಡಿ ಮಗಳಿಗೆ ಅಬಾರ್ಷನ್ ಮಾಡಿಸಲಾಗಿದೆ. ಅದಕ್ಕೆ ಬೇಕಾದ ಖರ್ಚಿನ ಬಾಬ್ತು 35 ಸಾವಿರ ರೂ.ಗಳನ್ನು ಆನ್‌ಲೈನ್ ಮುಖಾಂತರ ಶಿವರಾಜ್ ಭರಿಸಿದ್ದಾನೆ ಎಂದು ಹೇಳಿದ್ದಾಳೆ. ನನ್ನ ಮಗಳು ಹಾಗೂ ಪತ್ನಿ ಶಿವರಾಜನ ಸುಪರ್ದಿಯಲ್ಲಿದ್ದು, ಅವರನ್ನು ಪತ್ತೆ ಹಚ್ಚಿ, ಶಿವರಾಜ್ ವಿರುದ್ಧ ಪ್ರಕರಣ ದಾಖಲಿಸಿ ನನಗೆ ನ್ಯಾಯ ಒದಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಸೋಮವಾರ ಸಂಜೆ ಕಡಬ ಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಇನ್ನು ಕಡಬ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಮುಖಂಡರು ಕಡಬ ಠಾಣೆಗೆ ದೂರು ನೀಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಕೊಂಡು ಆರೋಪಿಯನ್ನು ಸೇವೆಯಿಂದ ವಜಾ ಮಾಡದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಭಾಸ್ಕರ ಧರ್ಮಸ್ಥಳ ಹಾಗೂ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ಎಚ್ಚರಿಸಿದ್ದಾರೆ.
Comments are closed.