ಕರಾವಳಿ

ದೈವಜ್ಞ ಬ್ರಾಹ್ಮಣ ಸಂಘದಿಂದ ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ “ಆರ್ಟಿಸನ್” ಐಡೆಂಟಿಟಿ ಕಾರ್ಡ್ ವಿತರಣೆ

Pinterest LinkedIn Tumblr

ಮಂಗಳೂರು: ದೈವಜ್ಞ ಬ್ರಾಹ್ಮಣ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಹಾಗೂ ಭಾರತ ಸರಕಾರದ ವಸ್ತ್ರ ಮಂತ್ರಾಲಯದ ಹ್ಯಾಂಡಿಕ್ರಾಫ್ಟ್ ವಿಸ್ತರಣಾ ಕೇಂದ್ರದ ಜಂಟಿ ಆಶ್ರಯದಲ್ಲಿ ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ “ಆರ್ಟಿಸನ್” ಐಡೆಂಟಿಟಿ ಕಾರ್ಡ್ ವಿತರಣಾ ಕಾರ್ಯಕ್ರಮವು ನಗರದ ಅಶೋಕ ನಗರದಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆಯಾದ ಶ್ರೀಮತಿ ಹೇಮಲತಾ ಸತೀಶ ಶೇಟ್ ಅವರು ಕಾರ್ಯಕ್ರಮವನ್ನು ದೀಪ‌ ಪ್ರಜ್ವಲಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ ಈ ಆರ್ಟಿಸನ್ ಕಾರ್ಡ್ ಮೂಲಕ ತಾವೂ ಓರ್ವ ಚಿನ್ನ-ಬೆಳ್ಳಿ ಕಲೆಗಾರರು ಎಂಬ ಮಾನ್ಯತೆ ದೊರಕಿದ್ದು ಮುಂದೆ ಕೇಂದ್ರ ಸರಕಾರದಿಂದ ಬರುವ ಯಾವುದೇ ಹೊಸ ಸ್ಕೀಂನ ಲಾಭವನ್ನು ಪಡೆಯಲು ಈ ಕಾರ್ಡ್ ಸಹಕಾರಿಯಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ “ಆರ್ಟಿಸನ್” ಕಾರ್ಡುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಲತಾ ಸತೀಶ ಶೇಟ್ ಹಾಗೂ ಸ್ಥಳೀಯ ಕಾರ್ಪೋರೆಟರುಗಳಾದ ಶ್ರೀಮತಿ ಜಯಲಕ್ಷ್ಮೀ ಹಾಗೂ ಶ್ರೀ ಗಣೇಶ ಕುಲಾಲ್ ಅವರನ್ನು ಹಾಗೂ ಹ್ಯಾಂಡಿಕ್ರಾಫ್ಟ್ ಪ್ರಮೋಷನ್ ಆಫೀಸರ್ ಆದ ಶ್ರೀ ಅಫ್ಲಾಹ್ ಹಸನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

BIS ಹಾಲ್ಮಾರ್ಕ್ ಕಡ್ಡಾಯದ ಬಳಿಕ ಸಣ್ಣ ಸ್ವರ್ಣೋದ್ಯಮಿಗಳು ತಯಾರಿಸಿದ ಒಂದೆರಡು ಹೊಸ ಆಭರಣಗಳನ್ನು ತುಂಡರಿಸಿ ಪರೀಕ್ಷಿಸುವ ಕಾರ್ಯದಿಂದ ಸಂಕಷ್ಟಕ್ಕೆ ಒಳಗಾದ ಸಣ್ಣ ಸ್ವರ್ಣೋದ್ಯಮಿಗಳು ಹಾಗೂ ಚಿನ್ನ-ಬೆಳ್ಳಿ ಕುಶಲಕರ್ಮಿಗಳ ಪರವಾಗಿ ಧ್ವನಿಯೆತ್ತಿ ಕೇಂದ್ರ ಮಂತ್ರಿ, ಸಂಸದರು, ಹಾಗೂ ಜನಪ್ರತಿನಿಧಿಗಳ ಮುಖೇನ ತಮ್ಮ ಅಳಲನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿ ಯಶಸ್ವಿಯಾದ ದೈವಜ್ಞ ಬ್ರಾಹ್ಮಣ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ, ಮಂಗಳೂರಿನ ಅಧ್ಯಕ್ಷರಾದ ಶ್ರೀ ಶ್ರೀಪಾದ ಬಿ. ರಾಯ್ಕರ್ ಹಾಗೂ ಕಾರ್ಯದರ್ಶಿ ಶ್ರೀ ರವಿ ಗೋಕರ್ಣಕರ್ ಅವರನ್ನು ದೈವಜ್ಞ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದೈವಜ್ಞ ಬ್ರಾಹ್ಮಣರ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ್ ಶೇಟ್, ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಅಶೋಕ ಶೇಟ್, ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ ಶೇಟ್ ಎಕ್ಕೂರು ಹಾಗೂ ದೈವಜ್ಞ ಮಹಿಳಾ ಮಂಡಳಿಯ ಶ್ರೀಮತಿ ಪುಷ್ಪಾ ಕೃಷ್ಣಾನಂದ ಶೇಟ್ ಅವರು ಉಪಸ್ಥಿತರಿದ್ದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶ್ರೀ ಅರುಣ್ ಜಿ. ಶೇಟ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀ ವಿಜಯಕಾಂತ ಶೇಟ್ ವಂದಿಸಿದರು.

Comments are closed.