
ಮೈಸೂರು: ತಮ್ಮನ್ನು ಮುಖ್ಯಮಂತ್ರಿಯಂತೂ ಮಾಡಲಿಲ್ಲ, ಉಪ ಮುಖ್ಯಮಂತ್ರಿಯನ್ನಾದರೂ ಮಾಡಲಿ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷಕ್ಕಾಗಿ ಹಲವು ವರ್ಷ ದುಡಿದಿದ್ದೇನೆ. ಹೀಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಬಹುದು ಎಂದು ಬೆಂಬಲಿಗರು ನಿರೀಕ್ಷೆ ಮಾಡಿದ್ದರು. ಪಕ್ಷದ ಹೈಕಮಾಂಡ್ ಬಸವರಾಜು ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆ. ಈಗ ಈಶ್ವರಪ್ಪ ಉಪಮುಖ್ಯಮಂತ್ರಿ ಆಗಲಿ ಅಂತ ಸ್ವಾಮೀಜಿಗಳು, ಬೆಂಬಲಿಗರು ಮತ್ತು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಿರಿತನ ಪರಿಗಣಿಸಿ ಡಿಸಿಎಂ ಹುದ್ದೆ ನೀಡುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ, ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಆದರೆ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕೆಲವು ಗೊಂದಲಗಳು ಇದ್ದಿದ್ದು ನಿಜ. ಆದರೆ ಬಿಜೆಪಿಯ ಎಲ್ಲ ಗೊಂದಲಗಳನ್ನೂ ಹೈಕಮಾಂಡ್ ಬಗೆಹರಿಸಿದೆ ಎಂದು ಹೇಳಿದರು.
ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಬಿಡಬೇಕು ಎಂಬುದು ಹೈಕಮಾಂಡ್ಗೆ ಗೊತ್ತಿದೆ. ನಮ್ಮಲ್ಲಿ ಇದ್ದ ಗೊಂದಲ ಬಗೆಹರಿದಿದೆ. ಆದರೆ ಈಗ ಕಾಂಗ್ರೆಸ್ನಲ್ಲಿ ಗೊಂದಲ ಶುರುವಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ತನ್ವೀರ್ ಸೇಠ್, ಎಂ.ಬಿ.ಪಾಟೀಲ್ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡಿದ್ದಾರೆ. ಇವರಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಅಂತ ಅವರ ಹೈಕಮಾಂಡ್ ಘೋಷಿಸಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.
Comments are closed.