
ಧನ್ಬಾದ್, ಜಾರ್ಖಂಡ್: ಹಿಟ್ ಆಂಡ್ ರನ್ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದ ಜಾರ್ಖಂಡ್ ನ್ಯಾಯಾಧೀಶರೊಬ್ಬರ ಪ್ರಕರಣ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದಿದ್ದ ದೃಶ್ಯವೊಂದು ಇಡೀ ಪ್ರಕರಣದ ಸ್ವರೂಪ ಬದಲಿಸಿದ್ದು, ನ್ಯಾಯಾಧೀಶರ ಸಾವು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಘಟನೆ ನ್ಯಾಯಾಂಗ ವಲಯದಲ್ಲಿ ಆಘಾತ ಉಂಟುಮಾಡಿದೆ. ಜಾರ್ಖಂಡ್ ಹೈಕೋರ್ಟ್ ಜತೆ ಈ ಬಗ್ಗೆ ಮಾತನಾಡಿರುವುದಾಗಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ತಿಳಿಸಿದ್ದಾರೆ.
Horrifying video where Judge #UttamAnand is hit with a sharp object in broad day light when he was on a morning walk in #Jharkhand . Wondering if this happened in a BJP ruled state, how some journalists & OPs would be shouting through roofs. Not a lead story yet. Libbie silence pic.twitter.com/Q7CX1gr0KF
— Baij Nath Sharma (@baijnathsharma_) July 29, 2021
ಧನ್ಬಾದ್‌ನ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆಟೋ ರಿಕ್ಷಾ ಚಾಲಕನನ್ನು ಆತನ ಸಹಚರನೊಂದಿಗೆ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ತಡವಾಗಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ಜಾರ್ಖಂಡ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಾಧೀಶ ಉತ್ತಮ್ ಆನಂದ್ ಅವರು ಧನ್ಬಾದ್‌ನಲ್ಲಿರುವ ತಮ್ಮ ಮನೆಯಿಂದ ಅರ್ಧ ಕಿಮೀ ದೂರದಲ್ಲಿ ಬೆಳಗಿನ ವಾಯು ವಿಹಾರಕ್ಕೆ ತೆರಳಿದ್ದರು. ಆಗ ‘ಅಪರಿಚಿತ ವಾಹನವೊಂದು’ ಡಿಕ್ಕಿ ಹೊಡೆದಿತ್ತು.
ಬುಧವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ನ್ಯಾಯಾಧೀಶರು ರಸ್ತೆಯ ಅಂಚಿನಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಆಟೋ ರಿಕ್ಷಾವೊಂದು ಅವರ ಕಡೆಗೆ ತಿರುಗಿ ಸಾಗಿದೆ. ಅವರಿಗೆ ಡಿಕ್ಕಿ ಹೊಡೆದ ಬಳಿಕ ವೇಗವಾಗಿ ಅಲ್ಲಿಂದ ಮುಂದೆ ಸಾಗಿದೆ. ಈ ಘಟನೆ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದೆ.
ಉತ್ತಮ್ ಆನಂದ್ ಅವರು ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ನೋಡಿದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಜಾಗಿಂಗ್ ಮಾಡುವಾಗ ಅವರ ಬಳಿ ಯಾವುದೇ ಗುರುತಿನ ವಸ್ತು ಇಲ್ಲದಿದ್ದರಿಂದ ಅವರ ಗುರುತು ಪತ್ತೆಹಚ್ಚಲು ಹಲವು ಗಂಟೆಗಳೇ ಬೇಕಾಗಿತ್ತು.
ಬೆಳಿಗ್ಗೆ 7 ಗಂಟೆಯಾದರೂ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಅವರ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿತ್ತು. ಕೊನೆಗೆ ಆಸ್ಪತ್ರೆಯಲ್ಲಿ ಇರುವ ವ್ಯಕ್ತಿ ಅವರೇ ಎಂದು ಪೊಲೀಸರು ಪತ್ತೆಹಚ್ಚಿದರು. ಆಟೋ ರಿಕ್ಷಾ ಅವರಿಗೆ ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದಿರುವುದು ಸಿಸಿಟಿವಿ ದೃಶ್ಯಗಳಿಂದ ಸ್ಪಷ್ಟವಾಗಿದೆ. ನ್ಯಾಯಾಧೀಶರಿಗೆ ಡಿಕ್ಕಿ ಹೊಡೆಯುವ ಕೆಲವೇ ಗಂಟೆಗಳ ಮುನ್ನ ಆಟೋವನ್ನು ಕಳವು ಮಾಡಲಾಗಿತ್ತು.
ಲಖನ್ ಕುಮಾರ್ ವರ್ಮಾ ಮತ್ತು ರಾಹುಲ್ ವರ್ಮಾ ಎಂಬಿಬ್ಬರನ್ನು ಬಂಧಿಸಿ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಧನ್ಬಾದ್ ಪಟ್ಟಣದಲ್ಲಿ ಮಾಫಿಯಾ ಕೊಲೆಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳನ್ನು ನ್ಯಾಯಾಧೀಶರು ನಿಭಾಯಿಸುತ್ತಿದ್ದರು. ಇತ್ತೀಚೆಗೆ ಇಬ್ಬರು ಗ್ಯಾಂಗ್‌ಸ್ಟರ್‌ಗಳ ಜಾಮೀನು ನಿರಾಕರಿಸಿದ್ದರು.
ಅಪಘಾತದಿಂದ ಕೊಲೆ ಎಂದು ಪ್ರಕರಣವನ್ನು ಪರಿವರ್ತಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಿಸುವಲ್ಲಿನ ವಿಳಂಬದ ಬಗ್ಗೆ ಜಾರ್ಖಂರ್ ಮುಖ್ಯ ನ್ಯಾಯಮೂರ್ತಿ ರವಿ ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸರು ಸೂಕ್ತ ಕೆಲಸ ಮಾಡದೆ ಇದ್ದರೆ ಸಿಬಿಐ ತನಿಖೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Comments are closed.