ಕರಾವಳಿ

ಖುಷಿಖುಷಿಯಿಂದ ಬಂದು ನಿರಾತಂಕವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಕುಂದಾಪುರದ ವಿದ್ಯಾರ್ಥಿಗಳು

Pinterest LinkedIn Tumblr

ಕುಂದಾಪುರ: ಕೊರೋನಾ ಹಿನ್ನೆಲೆ ಶಾಲೆಗಳು ತೆರೆಯಲಿಲ್ಲ, ಮನೆಯಲ್ಲೇ ಆನ್ಲೈನ್ ಕ್ಲಾಸ್ ಮೊದಲಾದವುಗಳನ್ನು ಎದುರಿಸಿ ಪರೀಕ್ಷೆ ನಡೆಯುತ್ತೋ ಇಲ್ಲವೋ ಎನ್ನುವ ಆತಂಕ‌ವಿತ್ತು. ಆದರೆ ಸರಕಾರ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಆದೇಶ ಹೊರಡಿಸಿದ ಬೆನ್ನಲ್ಲೆ ವಿದ್ಯಾರ್ಥಿಗಳು ಮತ್ತೆ ಚುರುಕುಗೊಂಡು ಪರೀಕ್ಷೆ ಎದುರಿಸಿಯೇ ಬಿಟ್ಟಿದ್ದಾರೆ. ಸೋಮವಾರ ಹತ್ತನೆ ತರಗತಿ ಮೂರು ಪರೀಕ್ಷೆಗಳು ನಡೆದಿದ್ದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ‌ ಕಚೇರಿ ವ್ಯಾಪ್ತಿಗೊಳಪಡುವ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಭೇಟಿ ನೀಡಿ ಪರಿಶೀಲಿಸಿದರು. ತಹಶಿಲ್ದಾರ್ ಆನಂದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ. ಪದ್ಮನಾಭ ಮೊದಲಾದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿಯಿತ್ತರು.

ಇಂದು ನಡೆದ ಗಣಿತ, ವಿಜ್ಞಾನ ಹಾಗೂ ಸಮಾಜ ವಿಷಯಕ್ಕೆ ಸಂಬಂಧಿಸಿದ ಪರೀಕ್ಷೆ ಸಾಂಗವಾಗಿ ನಡೆಯಿತು. ಬೆಳಿಗ್ಗೆ 10.15ಕ್ಕೆ ಪರೀಕ್ಷೆ ಆರಂಭ ಸಮಯ‌ ನಿಗದಿಯಾದರೂ ಕೂಡ ಆದೇಶದಂತೆ ಗಂಟೆಗೂ ಮೊದಲೇ ವಿದ್ಯಾರ್ಥಿಗಳು ಖುಷಿಖುಷಿಯಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದರು. ಒಂದಷ್ಟು ಹೊತ್ತು ಓದಿನ ಪುನರ್ಮನನ ಮಾಡಿಕೊಂಡ ವಿದ್ಯಾರ್ಥಿಗಳು 10.15ಕ್ಕೆ ಲಾಂಗ್ ಬೆಲ್ ಆಗುತ್ತಲೆ ಪರೀಕ್ಷೆ ಬರೆಯಲು ಆರಂಭಿಸಿದರು.

ಕುಂದಾಪುರ ವಲಯ ವ್ಯಾಪ್ತಿಯ ಸಿದ್ದಾಪುರದಲ್ಲಿ ಸರಕಾರಿ ಪಿಯು ಕಾಲೇಜ್, ಸರಸ್ವತಿ ಶಾಲೆ, ಶಂಕರನಾರಾಯಣದಲ್ಲಿ‌ ಮದರ್ ಥೆರೆಸಾ, ಸರಕಾರಿ ಪಿಯು ಕಾಲೇಜ್, ಬಸ್ರೂರಿನಲ್ಲಿ ಶಾರದ ವಿದ್ಯಾಲಯ ಮತ್ತು ಸರಕಾರಿ ಶಾಲೆ, ಬಿದ್ಕಲ್ ಕಟ್ಟೆಯಲ್ಲಿ 1, ತೆಕ್ಕಟ್ಟೆಯಲ್ಲಿ 1, ಕುಂದಾಪುರದ ಜ್ಯೂನಿಯರ್ ಕಾಲೇಜು, ವೆಂಕಟರಮಣ ಶಾಲೆ, ಮದರ್ ಥೆರೆಸಾ, ಸೈಂಟ್ ಫಿಲೋಮಿನಾ, ಗಂಗೊಳ್ಳಿ ಒಟ್ಟು 13 ಕೇಂದ್ರದಲ್ಲಿ 3814 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಕೋವಿಡ್ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಯಾನಿಂಗ್ ಮಾಡಲಾಗಿತ್ತು. ಸಾಮಾಜಿಕ ಅಂತರಕ್ಕೆ ಒತ್ತು ಕೊಡುವ ಜೊತೆಗೆ ಸ್ಯಾನಿಟೈಸರ್, ಮಾಸ್ಕ್ ಧಾರಣೆ ಮಾಡಿದ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕುಂದಾಪುರ ವಲಯದಲ್ಲಿ ಓರ್ವ ಕೋವಿಡ್ ಪಾಸಿಟಿವ್ ವಿದ್ಯಾರ್ಥಿ‌ ವಿಶೇಷ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾನೆ ಎನ್ನುವ ಮಾಹಿತಿಯಿದೆ.

ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿ ಹಾಗೂ ಮಾರ್ಗಸೂಚಿ ಪಾಲನೆ ಅನ್ವಯ ಪ್ರತಿ ಕೊಠಡಿಯಲ್ಲಿ 1 ಬೆಂಚಿನಲ್ಲಿ 1 ವಿದ್ಯಾರ್ಥಿಯಂತೆ ಗರಿಷ್ಟ 12 ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, 5 ಮಾರ್ಗ ಅಧಿಕಾರಿ ಹಾಗೂ ಸ್ಥಾನಿಕ ಜಾಗೃತ ಅಧಿಕಾರಿಗಳನ್ನು ನೇಮಿಸಲಾಗಿದೆ. ಯಾವುದೇ ವಿದ್ಯಾರ್ಥಿಗೆ ಪ್ರಯಾಣಕ್ಕೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆಯನ್ನು ಕರ್ನಾಟಕ ಸರಕಾರ ಮಾಡಿದೆ. ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯ ಸರಕಾರ ಆದೇಶ ನೀಡಿದೆ. ಕುಗ್ರಾಮಗಳ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಕ್ಕೆ ಬರಲು ಕಷ್ಟವಾಗುವ ವಿದ್ಯಾರ್ಥಿಗಳಿಗೆ ದಾನಿಗಳ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾರಿಗೆಯ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರ ಶಾಸಕರ ಮುತುವರ್ಜಿಯಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪ್ಕೊ ವತಿಯಿಂದ ಸರ್ಜಿಕಲ್ ಹಾಗೂ ಎನ್95 ಮಾಸ್ಕ್ ನೀಡುವ ಕಾರ್ಯವಾಗಿದೆ ಎಂದು‌ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ. ಪದ್ಮನಾಭ ಮಾಹಿತಿ ನೀಡಿದ್ದಾರೆ.

ಕುಂದಾಪುರ ಜ್ಯೂನಿಯರ್ ಕಾಲೇಜ್ ದೊಡ್ಡ ಪರೀಕ್ಷಾ ಕೇಂದ್ರ..
ಕುಂದಾಪುರ ಜ್ಯೂನಿಯರ್ ಕಾಲೇಜಿನಲ್ಲಿ 510 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದು ಈ ವಲಯ ವ್ಯಾಪ್ತಿಯ ಅತಿ ದೊಡ್ದ ಪರೀಕ್ಷಾ ಕೇಂದ್ರವಾಗಿದ್ದು 100% ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಶಿಕ್ಷಕರು ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡುವುದು ಮಾತ್ರವಲ್ಲದೆ ಶಿಕ್ಷಕರುಗಳು ಖುದ್ದು ಗೇಟಿನವರೆಗೆ ಬಂದು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಇಲ್ಲಿ ಓರ್ವ ವಿಕಲಸಾಮರ್ಥ್ಯ ಹಾಗೂ ಇಬ್ಬರು ವಿಶೇಷ ಚೇತನರು‌ ಸಹಾಯಕರ ಮೂಲಕ ಪರೀಕ್ಷೆ ಬರೆದರು.

ಪರಿಶ್ರಮದಿಂದ ಪಾಸ್ ಆಗುವ ಖುಷಿ…
ಕೋವಿಡ್ ಬ್ಯಾಚ್’ನಲ್ಲಿ ತೇರ್ಗಡೆಯಾಗುತ್ತಿಲ್ಲ.‌ಬದಲಾಗಿ ಪರಿಶ್ರಮದಿಂದ ಓದಿ ಪರೀಕ್ಷೆಯಲ್ಲಿ ತೊಡಗಿಸಿಕೊಂಡು ಉತ್ತೀರ್ಣರಾಗುವ ಪರಿಪೂರ್ಣತೆಯಿದೆ. ಕೊರೋನಾ ಆತಂಕ ಇರಲಿಲ್ಲ. ಪಾಲಕರು, ಶಿಕ್ಷಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಒಎಂಆರ್ ಶೀಟ್ ಮೂಲಕ ಪರೀಕ್ಷೆ ಎದುರಿಸಿದ್ದು ಒಂದೊಳ್ಳೆ ಅನುಭವ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.

ಪರೀಕ್ಷೆ ಮುಗಿಯುತ್ತಲೆ ಮಳೆ..
ಕರಾವಳಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು ಭಾನುವಾರವೂ ಮಳೆ ವ್ಯಾಪಕವಾಗಿದ್ದರೂ ಸೋಮವಾರ ಬೆಳಿಗ್ಗೆ ಮಾತ್ರ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣವಿತ್ತು. ಆದರೆ ಪರೀಕ್ಷೆ ಮುಗಿಯುವ ಹೊತ್ತಿಗೆ ಮತ್ತೆ ಮಳೆಯಾಗಿದ್ದು ವಿದ್ಯಾರ್ಥಿಗಳು ಕೊಡೆ ಆಶ್ರಯ ಪಡೆಯಬೇಕಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.