ಕರ್ನಾಟಕ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್: ಪರೀಕ್ಷೆ ರದ್ದುಕೋರಿ ಸಲ್ಲಿಸಿದ ಅರ್ಜಿ ವಜಾ..!

Pinterest LinkedIn Tumblr

ಬೆಂಗಳೂರು: 2020-21ರ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

ಕೊರೋನಾ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಎಸ್‌ವಿ ಸಿಂಗ್ರೇ ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಹಂಚಾಟೆ ಸಂಜೀವ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ.

ಈ ಸಾಲಿನ ಪರೀಕ್ಷೆ ಜುಲೈ 19 ಮತ್ತು 22ಕ್ಕೆ ಎರಡು ದಿನಗಳ ಅವಧಿಯಲ್ಲಿ ಪರೀಕ್ಷೆಗಳು ನಡೆಯಲಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯದ ಪರ ಹಾಜರಾದ ಅಡ್ವೊಕೇಟ್ ಜನರಲ್ (ಎಜಿ) ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಒಂದು ತರಗತಿಯಲ್ಲಿ ಕೇವಲ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಒಬ್ಬ ವಿದ್ಯಾರ್ಥಿಗೆ ಒಂದು ಮೇಜು. ಸಾಮಾಜಿಕ ಅಂತರವಿರಲಿದ್ದು ಆರೋಗ್ಯ ತಪಾಸಣೆಗಾಗಿ 2 ಅರೆವೈದ್ಯಕೀಯ ಸಿಬ್ಬಂದಿ ಇರುತ್ತಾರೆ ಎಂದು ಎಜಿ ಹೇಳಿದರು.

ರಾಜ್ಯ ಸರ್ಕಾರದ ವಾದವನ್ನು ಗಮನಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. “ನ್ಯಾಯಾಲಯವು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಒಲವು ತೋರುತ್ತಿಲ್ಲ. ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಎಲ್ಲಾ ಮಧ್ಯಸ್ಥಗಾರರಿಂದ ಪಾಲಿಸಬೇಕಾದ ಎಸ್‌ಒಪಿ ಅನ್ನು ಸುತ್ತೋಲೆ ರೂಪದಲ್ಲಿ ನೀಡುವ ಮೂಲಕ ಪರೀಕ್ಷೆಯನ್ನು ನಡೆಸಲು ರಾಜ್ಯವು ಕಾಳಜಿ ವಹಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಅರ್ಜಿಯಲ್ಲಿ ನಮಗೆ ಯಾವ ಗಮನಾರ್ಹ ಅಂಶಗಳು ಕಂಡುಬಂದಿಲ್ಲ.. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ತಮ್ಮ ಮನವಿಯಲ್ಲಿ, ಕೆಲವು ಸಂಸ್ಥೆಗಳಲ್ಲಿ ಆನ್‌ಲೈನ್ ತರಗತಿಗಳನ್ನು ಸರಿಯಾಗಿ ನಡೆಸಲಾಗಿಲ್ಲ ಮತ್ತು ಅನೇಕ ಮಕ್ಕಳು ಆನ್‌ಲೈನ್ ತರಗತಿಗಳ ಮೂಲಕ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ ಎಂದು ವಾದಿಸಿದ್ದರು.

Comments are closed.