ಕುಂದಾಪುರ: ತುಮಕೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಛಾಯಾಗ್ರಾಹಕರೊಬ್ಬರು ಚಿಕಿತ್ಸೆಗೆ ಫಲಕಾರಿಯಾಗದೇ ಮಂಗಳವಾರ ಬೆಳಿಗ್ಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾವುಂದ ಮಾನಸ ಸ್ಟುಡಿಯೋ ಮಾಲೀಕ ಹೇರೂರು ಅಶೋಕ್ ಶೆಟ್ಟಿ (58) ಮೃತ ದುರ್ದೈವಿ.

ಘಟನೆ ವಿವರ:
ಅಶೋಕ್ ಶೆಟ್ಟಿ ಬೆಂಗಳೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಫೋಟೋಗ್ರಫಿ ಮುಗಿಸಿ ಭಾನುವಾರ ತಡರಾತ್ರಿ ತಮ್ಮ ಕಾರಿನಲ್ಲಿ ಪುತ್ರ ಪನ್ನಗ ಶೆಟ್ಟಿ ಹಾಗೂ ಇನ್ನೋರ್ವ ಛಾಯಾಗ್ರಾಹಕ ಕುಮಾರ್ ಜೊತೆ ಮನೆಗೆ ಬರುತ್ತಿರುವ ವೇಳೆಯಲ್ಲಿ ಸೋಮವಾರ ನಸುಕಿನ ಜಾವ ತುಮಕೂರು ಸಮೀಪದ ತಾವರೆಕೆರೆ ಸಮೀಪಿಸುತ್ತಿದ್ದಂತೆಯೇ ಎದುರುಗಡೆಯಿಂದ ಸಾಗುತ್ತಿರುವ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಕಾರು ಚಲಾಯಿಸುತ್ತಿದ್ದ ಪನ್ನಗ ಶೆಟ್ಟಿ ಹಾಗೂ ಮುಂದೆ ಕುಳಿತಿದ್ದ ಅಶೋಕ್ ಶೆಟ್ಟಿಯವರಿಗೆ ಗಂಭೀರ ಗಾಯಗಳಾಗಿತ್ತು. ಕಾರಿನ ಹಿಂಬದಿ ಕುಳಿತಿದ್ದ ಇನ್ನೋರ್ವ ಛಾಯಾಗ್ರಾಹಕ ಕುಮಾರ್ ಗಾಯಗಳಿಲ್ಲದೇ ಪಾರಾಗಿದ್ದರು.
ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಅಶೋಕ್ ಶೆಟ್ಟಿಯವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಪುತ್ರ ಪನ್ನಗ ಶೆಟ್ಟಿಯವರನ್ನು ಸೋಮವಾರವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶೋಕ್ ಕುಮಾರ್ ಶೆಟ್ಟಿಯವರ ಮೃತದೇಹ ತುಮಕೂರಿನ ಆಸ್ಪತ್ರೆಯಲ್ಲಿದ್ದು ಮೃತದೇಹವನ್ನು ಊರಿಗೆ ತರುವ ಪ್ರಕ್ರಿಯೆಗಳು ನಡೆಯುತ್ತಿದೆ.ಅಶೋಕ್ ಕುಮಾರ್ ಶೆಟ್ಟಿಯವರು ಕುಂದಾಪುರ ತಾಲೂಕು ಛಾಯಾಗ್ರಾಹಕ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾಗಿದ್ದರು. ಪ್ರಸ್ತುತ ಜಿಲ್ಲಾ ಛಾಯಾಗ್ರಾಹಕ ಸಂಘದ ಸಂಚಾಲಕರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
Comments are closed.