
ಮಂಗಳೂರು, ಜೂನ್ 23 : ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದರೊಂದಿಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಸೂಚನೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಾದ್ಯಂತ ಕೊರೋನಾ ಸೋಂಕು ಗಣನೀಯವಾಗಿ ಕಡಿಮೆಯಾಗುವವರೆಗೆ ಜಿಲ್ಲೆಯಲ್ಲಿ ನಿರ್ಧಿಷ್ಟ ಕಾರ್ಯಚಟುಚಟಿಗಳು ನಡೆಯದಂತೆ ನೋಡಿಕೊಳ್ಳುವುದು ಒಳಿತು. ಪ್ರಸ್ತುತ ಜಿಲ್ಲೆಗೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಚಾಚುತಪ್ಪದೇ ಅನುಷ್ಠಾನಗೊಳಿಸುವುದರೊಂದಿಗೆ ಕೊರೋನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ವಾರಾಂತ್ಯ ಕಫ್ರ್ಯೂ ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಬೆಳಿಗ್ಗೆ 7 ರವರೆಗೆ ಪೂರ್ಣ ಪ್ರಮಾಣದ ಲಾಕ್‍ಡೌನ್ ಮಾಡಲಾಗುವುದು. ಹಾಲಿನ ಮಾರಾಟ ಕೇಂದ್ರಗಳನ್ನು ತೆರೆಯಲು ಮಾತ್ರ ಈ ಸಮಯದಲ್ಲಿ ಅವಕಾಶ ಮಾಡಿಕೊಡಲಾಗುವುದು. ಇತರೆ ಯಾವುದೇ ಚಟುಚಟಿಕೆಗಳಿಗೆ ಅವಕಾಶವಿಲ್ಲ ಎಂದರು.
ಮದುವೆ ಹಾಗೂ ಸಮಾರಂಭಗಳಲ್ಲಿ 25 ಜನರಿಗೆ ಸೀಮಿತಗೊಳಿಸಿ ಮನೆಯಲ್ಲಿಯೇ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಧಾರ್ಮಿಕ ಕೇಂದ್ರ, ಕಲ್ಯಾಣ ಮಂಟಪ ಹಾಗೂ ಇತರೆ ಭವನಗಳಲ್ಲಿ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ ಎಂದರು.
ತಾಲೂಕು ಕೇಂದ್ರಗಳು ಸೇರಿದಂತೆ ಮಂಗಳೂರು ನಗರ ಪ್ರದೇಶದೊಳಗೆ ಓಡಾಡಲೂ ಅನುಕೂಲವಾಗುವಂತೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಸಂಚಾರಕ್ಕೆ ಮಧ್ಯಾಹ್ನ 1 ಗಂಟೆವರೆಗೆ ಅವಕಾಶ ನೀಡಿದ್ದೂ, ಬಸ್ ಆಸನದ ಒಟ್ಟು ಸಂಖ್ಯೆಯ 50 ರಷ್ಟು ಜನರಿಗೆ ಅವಕಾಶ ನೀಡುವುದರೊಂದಿಗೆ, ಕಡ್ಡಾಯವಾಗಿ ಬಸ್‍ನಲ್ಲಿ ಸಂಚರಿಸುವವರು ಮಾಸ್ಕ್‍ಗಳನ್ನು ಧರಿಸಬೇಕೆಂಬ ಷರತ್ತಿನನ್ವಯ ಅನುಮತಿ ನೀಡಬೇಕು ಎಂದರು.
3 ನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ಹೆಚ್ಚು ಬಾಧಿಸುವ ಸಂಭವವಿದೆ ಎಂಬ ಬಗ್ಗೆ ಕೇಳಿಬರುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಓಡಾಡದಂತೆ ನಿರ್ಬಂಧಿಸುವುದು ಒಳಿತು ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು 9,000 ದಿಂದ 10,000 ದವರೆಗೆ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸಹಕರಿಸಿ ಹೆಚ್ಚು ಪರೀಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಗೆ ಕೋವಿಡ್ ಚುಚ್ಚುಮದ್ದು 23.000 ಕ್ಕೂ ಹೆಚ್ಚು ಬರುತ್ತಿದ್ದೂ ಬಂದಂತಹ ಲಸಿಕಾ ದಾಸ್ತಾನನ್ನು ಆ ದಿನವೇ ಪೂರ್ಣಪ್ರಮಾಣದಲ್ಲಿ ನೀಡಬೇಕು. 18 ವರ್ಷ ಮೇಲ್ಪಟ್ಟ ಆಧ್ಯತಾ ವಲಯದ ಪ್ರತಿಯೊಬ್ಬರಿಗೂ ಆಧ್ಯತೆ ಮೇಲೆ ಕೋವಿಡ್ ನಿರೋಧಕ ಲಸಿಕೆಯನ್ನು ನೀಡಬೇಕು ಎಂದರು.
ಜನ ಸಾಮಾನ್ಯರು ಮಧ್ಯಾಹ್ನ 2 ರ ನಂತರ ಅನಾವಶ್ಯಕವಾಗಿ ಓಡಾಡುವುದನ್ನು ಮಾಡಬಾರದು ಈ ಬಗ್ಗೆ ಪೊಲೀಸ್ ಇಲಾಖೆಯವರು ಎಚ್ಚರವಹಿಸಬೇಕು ಅಲ್ಲದೇ ಪ್ರತಿಯೊಬ್ಬರು ಮಾಸ್ಕ್ ಅನ್ನು ಧರಿಸಬೇಕು ತಪ್ಪಿದಲ್ಲಿ ಅಂತವರ ವಿರುದ್ಧ ದಂಡ ವಿಧಿಸಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್, ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಪ್ರತಾಪ್‍ಚಂದ್ರ ಶೆಟ್ಟಿ, ಹರೀಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನವಾನೆ, ಡಿ.ಸಿ.ಪಿ ಹರಿರಾಂ ಶಂಕರ್, ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್ ಹಾಗೂ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.