
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಕೋವಿಡ್ ಹಾಗು ಇತರೆ ಕಾರಣಗಳಿಂದ ಮೃತಪಟ್ಟ ಶವಗಳ ಅಂತ್ಯಕ್ರೆಯೆಗಾಗಿ ಮನಪಾ ಅಧೀನದ ಬೋಳೂರು ಸ್ಮಶಾನದಲ್ಲಿ ಸರ್ಕಾರದ ಅನುದಾನದಡಿ ರೂ. 71.00 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಗಾರವನ್ನು ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ.
ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಆಯುಕ್ತ ಅಕ್ಷಯ್ ಶ್ರೀಧರ್ ಅವರು ಶುಕ್ರವಾರ ಬೋಳೂರು ಸ್ಮಶಾನಕ್ಕೆ ಬೇಟಿ ನೀಡಿ ಪ್ರಗತಿಯಲ್ಲಿರುವ ವಿದ್ಯುತ್ ಚಿತಾಗಾರ ಕಾಮಗಾರಿಯನ್ನು ಪರಿಶೀಲಿಸಿದರು.
ಪ್ರಸ್ತುತ 2 ಸಂಖ್ಯೆಯ ವಿದ್ಯುತ್ ಕುಲುಮೆ (Furnace) ಯನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಈ ಪೈಕಿ ಈಗಾಗಲೇ 1 ವಿದ್ಯುತ್ ಕುಲುಮೆ (Furnace) ಯ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿದ್ದು, ಇನ್ನೊಂದು ವಿದ್ಯುತ್ ಕುಲುಮೆ (Furnace) ಯು ಮುಂದಿನ 15 ದಿನಗಳಲ್ಲಿ ಸಂಪೂರ್ಣಗೊಳಿಸುವಂತೆ ಮಹಾಪೌರರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಂದುವರೆದು ಈಗಾಗಲೇ ಪೂರ್ಣಗೊಂಡಿರುವ 01 ಸಂಖ್ಯೆ ವಿದ್ಯುತ್ ಚಿತಾಗಾರವು ದಿನಾಂಕ: 19.06.2021 ರಿಂದ ಸಾರ್ವಜನಿಕರ ಬಳಕೆಗೆ ಚಾಲನೆಗೊಳಿಸುವುದಾಗಿ ಮಹಾಪೌರರು ಪ್ರಕಟಿಸಿದರು.
ಅಲ್ಲದೆ ಸುರತ್ಕಲ್ ಪ್ರದೇಶದ ನಾಗರೀಕರಿಗೆ ಅನುಕೂಲವಾಗುವಂತೆ ಸುರತ್ಕಲ್ ಸ್ಮಶಾನದಲ್ಲಿ ರೂ. 180.00 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಅಭಿವೃದ್ಧಿಪಡಿಸುವ ಕಾಮಗಾರಿಗೆ ಈಗಾಗಲೇ ಮಂಜೂರಾತಿ ನೀಡಿದ್ದು, ಪ್ರಸ್ತುತ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರುಗಳಾದ ಶ್ರೀ ಜಗಧೀಶ್ ಶೆಟ್ಟಿ ಬೋಳೂರು ಮತ್ತು ಶ್ರೀ ಗಣೇಶ್ ಕುಲಾಲ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.