ಕರಾವಳಿ

ದ.ಕ.ಜಿಲ್ಲೆಯಲ್ಲಿ ಚಂಡಮಾರುತದಿಂದ 126 ಕೋಟಿ ನಷ್ಟ: ವಿಶೇಷ ಅನುದಾನ ಬಿಡುಗಡೆಗೆ ಮನವಿ

Pinterest LinkedIn Tumblr

ಮಂಗಳೂರು, ಮೇ 21: ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಮೀನುಗಾರಿಕಾ ಸಚಿವ ಅಂಗಾರರವರ ನೇತೃತ್ವದಲ್ಲಿ ಶಾಸಕರ ತಂಡವೊಂದು ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಸಿದ ಚಂಡಮಾರುತದ ಹಿನ್ನಲೆಯಲ್ಲಿ ಪಂಚಾಯತ್‍ರಾಜ್, ಲೋಕೋಪಯೋಗಿ, ಕಡಲ ಕೊರೆತವೂ ಸೇರಿದಂತೆ 126 ಕೋಟಿಯಷ್ಟು ನಷ್ಟವಾಗಿದ್ದು, ಪ್ರಾಕೃತಿಕ ವಿಕೋಪದಡಿ ಈ ನಷ್ಟ ಭರಿಸಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಸಚಿವ ಕೋಟಾ ನೇತೃತ್ವದ ಮಂತ್ರಿಗಳು ಮತ್ತು ಶಾಸಕರ ನಿಯೋಗ ಮನವಿ ಮಾಡಿತು.

ಜಿಲ್ಲೆಯ ಕೋವಿಡ್ ನಿಯಂತ್ರಣದ ಬಗ್ಗೆ ವಿವರವಾದ ಮಾಹಿತಿ ಒದಗಿಸಿದ ಶಾಸಕರು ಜಿಲ್ಲೆಗೆ ತುರ್ತಾಗಿ ವೈದ್ಯರು, ದಾದಿಯರು ಮತ್ತು ಆರೋಗ್ಯಮಿತ್ರ ಹುದ್ದೆಗಳ ಮಂಜೂರಾತಿಗೆ ಮನವಿ ಮಾಡಿದರು.

ಸುಳ್ಯ ಮತ್ತು ಪುತ್ತೂರು ತಾಲೂಕಿನ ಸ್ವಾಬ್ ಟೆಸ್ಟನ್ನು ಸುಳ್ಯದ ಮೆಡಿಕಲ್ ಕಾಲೇಜಿನಲ್ಲಿ ಮಾಡಲು ಅನುಮತಿ ಕೊಟ್ಟರೆ ವ್ಯರ್ಥವಾಗುವ ಸಮಯ ಉಳಿತಾಯವಾಗಿ 24 ಗಂಟೆಯೊಳಗೆ ಟೆಸ್ಟಿಂಗ್ ರಿಪೋರ್ಟ್ ಕೊಡಲು ಸಾಧ್ಯವಾಗುತ್ತದೆ ಮತ್ತು ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಸೌಲಭ್ಯ ನೀಡಲು ಅನುಮತಿ ನೀಡಬೇಕೆಂದು ಕೋರಿಕೆ ಸಲ್ಲಿಸಿದರು.

ಈಗಾಗಲೇ ವಿವಿಧ ರೂಪದಲ್ಲಿ ತೊಂದರೆಗೆ ಸಿಲುಕಿ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಪ್ಯಾಕೇಜ್ ಘೋಷಣೆ ಮಾಡ್ಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಕರಾವಳಿಯ ಶಾಸಕರು ಈಗಾಗಲೇ ಬೇಡಿಕೆ ಸಲ್ಲಿಸಿರುವ ಬಡ ಅರ್ಚಕರು, ಮೀನುಗಾರರು, ಬಸ್ಸು, ಟೆಂಪೊ, ಹೋಟೆಲ್ ಕಾರ್ಮಿಕರಿಗೂ ಪ್ಯಾಕೇಜ್ ವಿಸ್ತರಿಸಲು ಮನವಿ ಮಾಡಿದರು.

ಪ್ರಸ್ತುತ ಕೋವಿಡ್ ವಿರುದ್ದ ಸೆಣಸುತ್ತಿರುವ ಗ್ರಾಮ ಪಂಚಾಯತ್ ಹಾಗೂ ನಗರಸಭೆಗಳ ಕಾರ್ಯಪಡೆಯ ಎಲ್ಲಾ ಸದಸ್ಯರಿಗೆ ಆದ್ಯತೆಯಲ್ಲಿ ವ್ಯಾಕ್ಸಿನ್ ನೀಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದ ನಿಯೋಗ, ಚಂಡಮಾರುತದ ವೇಳೆ ದಕ್ಷಿಣ ಕನ್ನಡ ಕರಾವಳಿಯ ಕಡಲ ಮಧ್ಯೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದ ಕಾರ್ಮಿಕರ ರಕ್ಷಣೆಗೆ ಕೇಂದ್ರ ಸರಕಾರದ ಹೆಲಿಕಾಪ್ಟರ್ ನೆರವು ಕಲ್ಪಿಸಲು ನೆರವಾದ ಮುಖ್ಯಮಂತ್ರಿಗಳಗೆ ಅಭಿನಂದನೆ ಸಲ್ಲಿಸಿತು.

ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೊಂದಿಗೆ ಸಚಿವ ಅಂಗಾರ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನ್ಯಾಕ್ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮೊದಲಾದವರಿದ್ದರು.

Comments are closed.