ಕೋಲಾರ: ಒಂದೇ ಮುಹೂರ್ತದಲ್ಲಿ ಅಕ್ಕ ತಂಗಿಯನ್ನು ಮದುವೆ ಆಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಉಮಾಪತಿಗೆ ಈಗ ಸಂಕಷ್ಟ ಆರಂಭವಾಗಿದೆ. ಪತಿ ಮಹಾಶಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದ ಅಕ್ಕ ತಂಗಿಯರನ್ನು ಉಮಾಪತಿ ಎಂಬಾತ ಮದುವೆಯಾಗಿದ್ದ. ಮದುವೆಯ ಪೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಮಾತು ಬಾರದ ಅಕ್ಕನನ್ನು ಮದುವೆಯಾದರೆ ತಾನು ಮದುವೆಯಾಗೋದಾಗಿ ತಂಗಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಉಮಾಪತಿ ಒಂದೇ ಮುಹೂರ್ತದಲ್ಲಿ ಇಬ್ಬರನ್ನೂ ಮದುವೆಯಾಗಿದ್ದ.
ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಅವರು ತನಿಖೆಗೆ ಆದೇಶಿಸಿದ್ದರು. ತನಿಖೆಯ ವೇಳೆಯಲ್ಲಿ ತಂಗಿ ಅಪ್ರಾಪ್ತೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಕಾಯ್ದೆಯಡಿಯಲ್ಲಿ ಉಮಾಪತಿ ಸೇರಿ 7 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. ಎರಡು ಕಡೆಯ ನಾಲ್ವರು ಪೋಷಕರು, ಅರ್ಚಕ ಹಾಗೂ ವಿವಾಹ ಆಮಂತ್ರಣ ಪತ್ರಿಕೆ ಮುದ್ರಿಸಿದವನ ಮೇಲೆ ಕೇಸು ದಾಖಲಾಗಿದೆ. ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
Comments are closed.